ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು, ಬಜೆಟ್ ಮಂಡನೆಗೂ ಮುನ್ನ ಬಿಜೆಪಿ ನಾಯಕರು ಸಾಲು ಸಾಲು ಪತ್ರ ಬರೆಯುತ್ತಿದ್ದಾರೆ.
ವಿಧಾನ ಪರಿಷತ್ ವಿಪ ಸದಸ್ಯ ಛಲವಾದಿ ನಾರಾಯಣಸ್ವಾಮಿ ಎರಡು ಪುಟಗಳ ಪತ್ರ ಬರೆದು, ಬಜೆಟ್ ನಲ್ಲಿ ಅನುದಾನ ಮೀಸಲಿಡುವಾಗ ಎಚ್ಚರಿಕೆಯಿಂದ ಇರಿ. ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನ ಬೇರೆಡೆಗೆ ವರ್ಗಾವಣೆ ಮಾಡದಂತೆ ಮನವಿ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಪತ್ರ ಬರೆದಿದ್ದು, ಬಜೆಟ್ ಗೂ ಮುನ್ನ ಮಾನ್ಯ ಸಿದ್ಧರಾಮಯ್ಯನವರೇ ನೀವು 16 ನೇ ದಾಖಲೆಯ ಬಜೆಟ್ ಮಂಡಿಸುತ್ತಿದ್ದೀರಿ. ನಿಮಗೆ ಅಭಿನಂದನೆಗಳು ಎಂದು ಹಾರೈಸಿದ್ದಾರೆ.
ತಮ್ಮ ಕಾಂಗ್ರೆಸ್ ಪಕ್ಷ ಚುನಾವಣೆಯ ಹೊಸ್ತಿಲಿನಲ್ಲಿ ಸಾಲು ಸಾಲು ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಗ್ಯಾರೆಂಟಿಗಳ ಅನುಷ್ಠಾನಕ್ಕೆ ಸರ್ಕಾರ ಬೊಕ್ಕಸ ಖಾಲಿ ಮಾಡುತ್ತಿದೆ. ಜೊತೆಗೆ ಕಳೆದ ಎರಡು ವರ್ಷ 2023-24, 2024-25 ನೇ ಸಾಲಿನ ಬಜೆಟ್‌ನಲ್ಲಿ ಶಾಸಕರಿಗೆ ಕ್ಷೇತ್ರಾಭಿವೃದ್ಧಿ ಅನುದಾನವನ್ನು ನೀಡಿಲ್ಲ. ಯಾವುದೇ ಕಾಮಗಾರಿಗಳು ಪೂರ್ಣವಾಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಿಗೆಟ್ಟಿದೆ. ಕಳೆದೆರಡು ವರ್ಷಗಳ ಮಾದರಿಯಲ್ಲಿಯೇ ಈ ಬಾರಿ ಬಜೆಟ್ ಮಂಡಿಸಬೇಡಿ. ನಿಮ್ಮ ಜವಾಬ್ದಾರಿ ಅರ್ಥಮಾಡಿಕೊಂಡು ಬಜೆಟ್ ಮಂಡಿಸಿ. ನೀವು ಅಧಿಕಾರಕ್ಕೆ ಬಂದ ಬಳಿಕ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಗಗನಕ್ಕೇರಿವೆ. ಪೆಟ್ರೋಲ್, ಹಾಲು ಜನರ ಜೇಬು ಸುಡುತ್ತಿದೆ. ಇದನ್ನೆಲ್ಲ ಮನಗಂಡು ಅರ್ಥಪೂರ್ಣ ಬಜೆಟ್ ಮಂಡಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕಳೆದೆರಡು ವರ್ಷಗಳ ಗ್ಯಾರೆಂಟಿಗಳ ಹಿನ್ನೆಲೆಯಲ್ಲಿ, ದಶಕಗಳಷ್ಟು ಅಭಿವೃದ್ಧಿ ಹಿಂದಕ್ಕೆ ಹೋಗಿದೆ. ಮಹಿಳೆಯರಿಗೆ ಅಸುರಕ್ಷತೆ, ಬಾಣಂತಿಯರ ಸರಣಿ ಸಾವು, ಮೆಟ್ರೋ ದರ ಏರಿಕೆ, ನೀರಿನ ದರ ಏರಿಕೆ, ಪೆಟ್ರೋಲ್ ದರ ಏರಿಕೆ, ರೈತರ ಆತ್ಮಹತ್ಯೆಗಳು ನಿಮ್ಮ ಸರ್ಕಾರವನ್ನು ಬಾಧಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ನಿಮ್ಮದೇ ಸರ್ಕಾರದಲ್ಲಿ ಉಪ- ಮುಖ್ಯಮಂತ್ರಿಗಳಾಗಿ, ಬೆಂಗಳೂರು ನಗರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿ.ಕೆ. ಶಿವಕುಮಾರ್, “ಬೆಂಗಳೂರನ್ನು ಸುಸ್ಥಿರಗೊಳಿಸಲು ಭಗವಂತನ ಕೈಯಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ. ಇತ್ತೀಚೆಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿನ ಗಲಭೆ ಪ್ರಕರಣ, ಪೊಲೀಸರ ಮೇಲೆ ದೌರ್ಜನ್ಯ, ತುಷ್ಟೀಕರಣ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಮ್ಮ ಆಡಳಿತ ಅವಧಿಯಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. 9 ವಿವಿಗಳನ್ನು ಮುಚ್ಚಲು ಮುಂದಾಗಿರುವುದು ದುರದೃಷ್ಟಕರ. ಶಿಕ್ಷಣಕ್ಕೆ ಆದ್ಯತೆ ನೀಡುವ ಬದಲಿಗೆ ಮುಚ್ಚುವ ಹಂತಕ್ಕೆ ತಲುಪಿದೆ. ತಾವು ಎರಡೇ ವರ್ಷದಲ್ಲಿ 2 ಲಕ್ಷ ಕೋಟಿ ರೂ. ಸಾಲ ಮಾಡಿದ್ದೀರಿ. ಬಸ್ಸಿಗೆ ಪ್ರಯಾಣ ದರ ಶೇ. 15ರಷ್ಟು ಏರಿಕೆ ಮಾಡಿದ್ದೀರಿ. ಕರ್ನಾಟಕ ರಾಜ್ಯವು ದಿವಾಳಿಯಾಗುವತ್ತಾ ಸಾಗಿದೆ.
ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಸಂಬಳ ಕೊಡಲು ಹಣವಿಲ್ಲ. ಸಾರಿಗೆ ಇಲಾಖೆಗೆ ಸರ್ಕಾರ ಕೊಡಬೇಕಾದ 7 ಸಾವಿರ ಕೋಟಿ ರೂ. ಬಾಕಿಯಿದೆ. ವಿದ್ಯುತ್ ಬಿಲ್ ಕಟ್ಟಲಾಗದೆ ಎಲ್ಲಾಎಸ್ಕಾಂಗಳು ದಯನೀಯ ಸ್ಥಿತಿ ತಲುಪಿವೆ. ಇಂತಹ ಸ್ಥಿತಿಯಲ್ಲಿ ನಿಮ್ಮ ಸಂಪುಟದ ಸಹೋದ್ಯೋಗಿಗಳು ನೀಡುತ್ತಿರುವ ಹೇಳಿಕೆಗಳು ನಿಮ್ಮ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿಲ್ಲವೇ? ತಾವು ಈ ಬಾರಿ ಮಂಡಿಸಲಿರುವ ಬಜೆಟ್‌ನಲ್ಲಿ ರಾಜ್ಯವನ್ನು ಸುಸ್ಥಿರ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ ಮತ್ತು ವಿವೇಚನಾಯುಕ್ತ ಹಣಕಾಸಿನ ಅಡಿಪಾಯವಾಗಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.