ಬೆಂಗಳೂರು: ಸರ್ಕಾರಿ ನೌಕರರೊಬ್ಬರು ಎನ್ಐಎ ಸೇರಿದಂತೆ ಮತ್ತಿತರ ಕ್ರಿಮಿನಲ್ ಪ್ರಕರಣಗಳಡಿ 48 ಗಂಟೆಗಳಿಗೂ ಹೆಚ್ಚು ಕಾಲ ಬಂಧನಕ್ಕೆ ಒಳಗಾದರೆ ಅಥವಾ ನಂತರ ಜಾಮೀನು ಸಿಕ್ಕರೆ ಆತ ಸೇವೆಯಿಂದಲೂ ಅಮಾನತು ಆಗುತ್ತಾನೆ ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎಂ.ಪದ್ಮನಾಭ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
48 ಗಂಟೆಗಳಿಗೂ ಹೆಚ್ಚು ಕಾಲ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974 (ಕೊಫೇಪೋಸಾ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ 2008 (ಎನ್ಐಎ) ಅಥವಾ ಇನ್ನಾವುದೇ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಗಳಡಿ ಬಂಧನಕ್ಕೊಳಗಾದಲ್ಲಿ ಅವರು ಸೇವೆಯಿಂದ ಅಮಾನತುಗೊಂಡಂತಾಗಿದೆ. ಜಾಮೀನಿನ ಮೇಲೆ ಹೊರಬಂದರೂ ಕೂಡ ಸಕ್ಷಮ ಪ್ರಾಧಿಕಾರವು ತನ್ನ ಈ ಹಿಂದಿನ ಆದೇಶ(ಅಮಾನತು) ರದ್ದುಗೊಳಿಸಿ, ಮುಂದಿನ ಔಪಚಾರಿಕ ಆದೇಶ ನೀಡುವವರೆಗೂ ಅಮಾನತು ಮುಂದುವರೆಯಲಿದೆ ಎಂದು ಕೋರ್ಟ್ ಹೇಳಿದೆ.
48 ಗಂಟೆಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದರೆ ಆತ ಸೇವೆಯಿಂದ ತಾನಾಗಿಯೇ ಅಮಾನತುಗೊಳ್ಳುತ್ತಾನೆ. ಬಂಧನಕ್ಕೆ ಒಳಗಾಗಿದ್ದ ಸರ್ಕಾರಿ ನೌಕರನೊಬ್ಬ ಕೋರ್ಟ್ನಿಂದ ಜಾಮೀನು ಪಡೆದು ಹೊರಗೆ ಬಂದ ಮೇಲೆ ನೇರ ಕಚೇರಿಗೆ ಹೋಗಬಹುದೇ, ಇಲ್ಲವೇ ಎಂಬುದನ್ನು 2015ರ ಸರ್ಕಾರಿ ಸುತ್ತೋಲೆಯ ಪ್ರಕಾರ ಸಕ್ಷಮ ಪ್ರಾಧಿಕಾರವೇ ನಿರ್ಧರಿಸಬೇಕು. ಅಂತಹ ನೌಕರನ ಅಮಾನತು ಆದೇಶವನ್ನು ರದ್ದುಪಡಿಸಬೇಕೊ? ಬೇಡವೊ? ಎಂಬ ನಿರ್ಧಾರವನ್ನು ಪ್ರಾಧಿಕಾರವೇ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.