ಬೆಂಗಳೂರು: ರಾಜ್ಯದಲ್ಲಿ ಕೂಡ ಏಕನಾಥ್ ಶಿಂಧೆಯಂತೆ ತುಂಬಾ ಜನ ಇದ್ದಾರೆ. ಈ ಪೈಕಿ ಡಿಕೆ ಶಿವಕುಮಾರ್ (DK Shivakumar) ಕೂಡ ಒಬ್ಬರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಮಾರ್ಮಿಕವಾಗಿ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನಲ್ಲಿರುವ ಟ್ಯಾಲೆಂಟ್ ಉಪಯೋಗ ಮಾಡಿಕೊಳ್ಳಿ ಮತ್ತು ಸಿಎಂ ಪದವಿಯನ್ನು ಒದ್ದು ಕಿತ್ತುಕೊಳ್ಳುತ್ತೀನಿ ಎಂದು ಡಿಕೆಶಿ ಹೇಳಿದ್ದಾರೆ. ಖರ್ಗೆ ಕುಂಭಮೇಳಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಂಭಮೇಳಕ್ಕೆ ಹೋಗಿಲ್ಲ. ಆದರೆ ಡಿಕೆಶಿ ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಕುಟುಂಬ ಸಮೇತ ಮುಳುಗಿ ಬಂದಿದ್ದಾರೆ.
ಧರ್ಮದ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹೋಗುವುದು ಸಾಮಾನ್ಯ. ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಈ ಹಿಂದೆ ಪ್ರಧಾನಿ ಕೂಡ ತೆರಳಿದ್ದರು. ಅಮಿತ್ ಶಾ ಭಾಗವಹಿಸಿದ್ದರು. ಆದರೆ, ಈಗ ಡಿಕೆಶಿ ಯಾವ ಕಾರಣಕ್ಕೆ ಹೋಗಿದ್ದು ಎಂಬ ಆಕ್ಷೇಪ ಆರಂಭವಾಗಿದೆ. ಡಿಕೆಶಿ ಅವರು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬಪಂದಿದ್ದಾರೆ. ಈಗ ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ. ಹಾಗಾದರೆ ಕಾಂಗ್ರೆಸ್ ಡಿಕೆಶಿಯನ್ನು ಪಕ್ಷದಿಂದ ಹೊರ ಹಾಕಲಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ವೀಕ್ ಸಿಎಂ, ಅವರನ್ನು ಯಾವ ರಾಜ್ಯದಲ್ಲೂ ಮೂಸಿ ನೋಡಲ್ಲ, ಸಿದ್ದರಾಮಯ್ಯ ಮಾಸ್ ಲೀಡರ್ ಅಲ್ಲ, ನಾನೇ ಮಾಸ್ ಲೀಡರ್ ಎಂದು ಡಿಕೆಶಿ ಸಂದೇಶ ನೀಡಿದ್ದಾರೆ. ಈ ಸರ್ಕಾರಕ್ಕೆ ನವೆಂಬರ್ ಡೆಡ್ ಲೈನ್ ಇದೆ ಎಂದು ನಾನು ಹೇಳಿದ್ದೆ. ನಾನು ಹೇಳಿದಂತೆ ಅದು ನಡೆಯುತ್ತದೆ ಎಂದಿದ್ದಾರೆ.