ಬೆಂಗಳೂರು: ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಹೌದು, ಗೃಹಲಕ್ಷ್ಮೀ ಫಲಾನುಭವಿಗಳು ಇನ್ನುಮುಂದೆ ಯೋಜನೆಯ ಲಾಭ ಪಡೆಯಲು ಜೀವಿತ ಪ್ರಮಾಣಪತ್ರ (Life Certificate) ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಕುರಿತು ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರ ಮುಖ್ಯ ಕಾಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಜೀವಿತ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಧನಸಹಾಯ ನೀಡುವ ಗೃಹಲಕ್ಷ್ಮೀ ಯೋಜನೆಗೆ 2023ರ ಜೂನ್ ನಲ್ಲಿ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಅದರಂತೆ, ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ 2 ಸಾವಿರ ರೂಪಾಯಿ ಸಂದಾಯವಾಗುತ್ತಿದೆ. ಆದರೆ, ಇತ್ತೀಚೆಗೆ ಮೃತಪಟ್ಟವರ ಖಾತೆಗಳಿಗೂ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇದುವರೆಗೆ 1,24,12,543 ಅರ್ಹ ಫಲಾನುಭವಿಗಳಿಗೆ ಸುಮಾರು 57,300 ಕೋಟಿ ರೂಪಾಯಿ ಜಮೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದುವರೆಗೆ ನಿವೃತ್ತ ಸರ್ಕಾರಿ ನೌಕರರು ಪ್ರತಿ ವರ್ಷ ತಮ್ಮ ಪಿಂಚಣಿ ಮುಂದುವರಿಸಲು ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದೇ ಮಾದರಿಯಲ್ಲಿ, ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆಗೂ ಜೀವಿತ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯಗೊಳಿಸುತ್ತಿದೆ. ಆನ್ ಲೈನ್ ಮೂಲಕವೂ ಫಲಾನುಭವಿಗಳು ಜೀವಿತ ಪ್ರಮಾಣಪತ್ರ ಸಲ್ಲಿಸುವ ಅವಕಾಶವಿರುತ್ತದೆ.
ಇದನ್ನೂ ಓದಿ : ಮಾದಕ ವಸ್ತು, ಮಾನವ ಕಳ್ಳಸಾಗಣೆ ಆರೋಪ | ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ದಿನೇಶ್ ಕಲ್ಲಹಳ್ಳಿ ಮನವಿ



















