ಬೆಂಗಳೂರು: ಮಂಥ್ಲಿ ಮನಿ, ‘ಹಫ್ತಾ’ ವಸೂಲಿ, ‘ಕಾಸಿಗಾಗಿ ಪೋಸ್ಟಿಂಗ್ ದಂಧೆ, ಕಿಕ್‌ಬ್ಯಾಕ್, ಹೋಟೆಲ್ ಮತ್ತು ವಸತಿಗೃಹ ಮಂಜೂರಾತಿಗೆ ಕೋಟ್ಯಂತರ ರೂಪಾಯಿ ಲಂಚ ವಸೂಲಿ ಮತ್ತು ಮಧ್ಯವರ್ತಿಗಳ ಹಾವಳಿ ಸೇರಿ ಒಂದಿಲ್ಲೊಂದು ಅಕ್ರಮ ನಡೆಯುತ್ತಿರುವ ಅಬಕಾರಿ ಇಲಾಖೆಯಲ್ಲಿ ನಿಯಮಬಾಹಿರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲ ಅಧಿಕಾರಿಗಳು ನೂರಾರು ಸಿಎಲ್-7 ಪರವಾನಗಿ ಮಂಜೂರಾತಿ ಮಾಡಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿದೆ.
ಬೆಂಗಳೂರು ಅಬಕಾರಿ ವಲಯ ಬಿಯುಡಿ-8 ವ್ಯಾಪ್ತಿಯ ಮೇದಹಳ್ಳಿ, ಕೌದೇನಹಳ್ಳಿ, ಬೀದರಹಳ್ಳಿ, ರಾಮಪುರ ಸೇರಿದಂತೆ ಹಲವೆಡೆ ನಿಯಮಬಾಹಿರವಾಗಿ ಸಿಎಲ್-7 ಲೈಸೆನ್ಸ್ ಮಂಜೂರಾತಿ ಮಾಡಿರುವುದು ಪತ್ತೆಯಾಗಿದೆ.
ತನಿಖೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನೀಡುವ ಸಿಎಲ್-9 ಪರವಾನಗಿಯಡಿ ಇರುವ ಮದ್ಯ ಸೇವನೆ ವಿಭಾಗಗಳನ್ನು ಸಿಎಲ್-7 ಕೊಠಡಿಗಳೆಂದು ತೋರಿಸಿ ನಕಲಿ ನೀಲನಕ್ಷೆಗಳನ್ನು ಸಿದ್ಧಪಡಿಸಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಬೇರೆ ಕಟ್ಟಡಗಳ ಕಿಚನ್, ರೂಂಗಳು, ಡೈನಿಂಗ್ ಹಾಲ್‌ಗಳ ಛಾಯಾಚಿತ್ರಗಳನ್ನು ಸಲ್ಲಿಸಿ ಅವುಗಳನ್ನು ಸಿಎಲ್-7 ಕಟ್ಟಡಗಳೆಂದು ತೋರಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗೆ ಕೆರೆ ಜಾಗವನ್ನು ತೋರಿಸಿರುವುದು, ಸುಳ್ಳು ಟ್ರೇಡ್ ಲೈಸೆನ್ಸ್‌ಗಳನ್ನು ಸಲ್ಲಿಸಿರುವುದು ಕೂಡ ತನಿಖೆಯಲ್ಲಿ ಪತ್ತೆಯಾಗಿದೆ.
ಅಸ್ತಿತ್ವದಲ್ಲಿರುವ ಸಿಎಲ್-9 ಕಟ್ಟಡಗಳ ವಿಳಾಸಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ದಾಖಲೆಗಳ ಮೂಲಕ ಸಿಎಲ್-7 ಲೈಸೆನ್ಸ್‌ಗಳನ್ನು ಮಂಜೂರು ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಕಟ್ಟಡಗಳೇ ಇಲ್ಲದಿದ್ದರೂ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಲೈಸೆನ್ಸ್ ಪಡೆದಿರುವುದು ಕೂಡ ಬಹಿರಂಗವಾಗಿದೆ. ಇನ್ನೂ ಕೆಲವೆಡೆಗಳಲ್ಲಿ ಸಿಎಲ್-7 ಸನ್ನದು ಮಂಜೂರಾದ ನಂತರ, ಅದೇ ಕಟ್ಟಡದಲ್ಲಿದ್ದ ಸಿಎಲ್-9 ಪರವಾನಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಆ ಕಟ್ಟಡವನ್ನು ಸಿಎಲ್-7 ಎಂದು ತೋರಿಸಿರುವುದಾಗಿ ತಿಳಿದುಬಂದಿದೆ.
ಈ ಕುರಿತು ವಕೀಲ ಡಾ. ಹರಿಪ್ರಸಾದ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಅಧಿಕಾರಿಗಳ ನಿರ್ಲಕ್ಷ್ಯ : ಬೆಂಗಳೂರಲ್ಲಿ ಚರಂಡಿಗೆ ಬಿದ್ದ ವ್ಯಕ್ತಿ!


















