ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ದೇಶದ ಸರಕಾರಿ ಸ್ವಾಮ್ಯದ ಪ್ರಮುಖ ವಿಮಾ ಸಂಸ್ಥೆಯಾಗಿದೆ. ಇದು ಹೆಚ್ಚಿನ ಜನರ ವಿಶ್ವಾಸವನ್ನೂ ಗಳಿಸಿದೆ. ಇಂತಹ ಎಲ್ಐಸಿಯು ಈಗ ಹೊಸ ಯೋಜನೆ ಜಾರಿಗೆ ತರುತ್ತಿದೆ. ಎಲ್ಐಸಿ ಜೀವನ್ ಉತ್ಸವ್ ಸಿಂಗಲ್ ಪ್ರೀಮಿಯಂ ಯೋಜನೆ (883) ಇದಾಗಿದ್ದು, ಜನವರಿ 12ರಿಂದ ಜಾರಿಗೆ ಬರಲಿದೆ. ಒಮ್ಮೆ ಪ್ರೀಮಿಯಂ ಪಾವತಿಸಿದರೆ ಸಾಕು, ಯೋಜನೆ ಅನ್ವಯ ಹಲವು ಲಾಭ ಪಡೆಯಬಹುದಾಗಿದೆ.
ರೆಗ್ಯುಲರ್ ಇನ್ ಕಮ್ ಬೆನಿಫಿಟ್ ಹಾಗೂ ಫ್ಲೆಕ್ಸಿ ಇನ್ ಕಮ್ ಬೆನಿಫಿಟ್ ಎಂಬ ಆಯ್ಕೆಗಳನ್ನು ನೀಡಲಾಗಿದೆ. 30 ದಿನಗಳ ಮಕ್ಕಳಿಂದ ಹಿಡಿದು ಗರಿಷ್ಠ 65 ವರ್ಷ ವಯಸ್ಸಿನವರು ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರು.ಕನಿಷ್ಠ ಮೂಲ ವಿಮಾ ಮೊತ್ತ (Basic Sum Assured) 5 ಲಕ್ಷ ರೂಪಾಯಿ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಎಷ್ಟು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ. ಪಾಲಿಸಿಯ ಅವಧಿಯಲ್ಲಿ ಪ್ರತಿ 1,000 ರೂಪಾಯಿ ವಿಮಾ ಮೊತ್ತಕ್ಕೆ ವಾರ್ಷಿಕವಾಗಿ 40 ರೂ.ನಂತೆ ಗ್ಯಾರಂಟಿಡ್ ಅಡಿಶನ್ಸ್ ಮೂಲಕ ಜಮೆಯಾಗುತ್ತದೆ.
ರೆಗ್ಯುಲರ್ ಬೆನಿಫಿಟ್ ಆಪ್ಶನ್ ಅನ್ವಯ ಪಾಲಿಸಿದಾರರು ಆಯ್ಕೆ ಮಾಡಿದ ಅವಧಿಯನ್ನು ಅವಲಂಬಿಸಿ (7 ರಿಂದ 17 ವರ್ಷಗಳ ನಂತರ), ಪ್ರತಿ ವರ್ಷ ಮೂಲ ವಿಮಾ ಮೊತ್ತದ 10% ರಷ್ಟು ಆದಾಯ ಲಭಿಸುತ್ತದೆ. ಅಂದರೆ, ಆಯ್ಕೆ ಮಾಡಿದ ವರ್ಷದ ನಂತರದ ವರ್ಷದಿಂದ ಆದಾಯ ಬರಲು ಪ್ರಾರಂಭವಾಗುತ್ತದೆ. ವ್ಯಕ್ತಿಗಳ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಆಯ್ಕೆ ಮಾಡಿಕೊಳ್ಳಬಹುದು..
ಫ್ಲೆಕ್ಸಿ ಬೆನಿಫಿಟ್ ಆಪ್ಶನ್ ಅಡಿಯಲ್ಲಿ ಪಾಲಿಸಿದಾರರು ತಮಗೆ ಬರಬೇಕಾದ 10% ಆದಾಯವನ್ನು ತಕ್ಷಣವೇ ಪಡೆಯುವ ಬದಲು ಎಲ್ಐಸಿಯಲ್ಲೇ ಉಳಿಸಬಹುದು. ಹೀಗೆ ಜಮಾ ಮಾಡಿದ ಮೊತ್ತಕ್ಕೆ ಸಂಸ್ಥೆಯು ವಾರ್ಷಿಕ 5.5% ಬಡ್ಡಿಯನ್ನು (ವಾರ್ಷಿಕ ಚಕ್ರಬಡ್ಡಿ) ಪಾವತಿಸುತ್ತದೆ. ಪಾಲಿಸಿದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಮೊತ್ತವನ್ನು ಹಿಂಪಡೆಯಬಹುದು. ಜಮೆಯಾದ ಮೊತ್ತದಲ್ಲಿ ಶೇ.75 ರಷ್ಟು ಹಣವನ್ನು ಹಿಂಪಡೆಯಲು ಅವಕಾಶವಿರುತ್ತದೆ.
ಇಲ್ಲಿವೆ ಎರಡೂ ಯೋಜನೆಗಳ ವಿವರಣೆ
35 ವರ್ಷದ ಕಿರಣ್ ಎಂಬುವವರು 10 ಲಕ್ಷ ರೂಪಾಯಿ ವಿಮಾ ಮೊತ್ತದ ಪಾಲಿಸಿಯನ್ನು ಖರೀದಿಸಿದ್ದಾರೆ ಎಂದಿಟ್ಟುಕೊಳ್ಳೋಣ. ಅವರು 10 ವರ್ಷಗಳ ‘ಗ್ಯಾರಂಟಿಡ್ ಅಡಿಶನ್’ ಅವಧಿಯನ್ನು ಆರಿಸಿಕೊಂಡರೆ, ಸಿಂಗಲ್ ಪ್ರೀಮಿಯಂ ಆಗಿ ಸುಮಾರು 8,08,650 ರೂಪಾಯಿ ಪಾವತಿಸಬೇಕಾಗುತ್ತದೆ.
ಆದರೆ, ಅವರಿಗೆ 45 ವರ್ಷ ತುಂಬಿದ ನಂತರ ಆದಾಯ ಬರಲು ಪ್ರಾರಂಭವಾಗುತ್ತದೆ. ಅವರಿಗೆ 100 ವರ್ಷ ತುಂಬುವವರೆಗೆ ಪ್ರತಿ ವರ್ಷ 1 ಲಕ್ಷ ರೂ. ಪಾವತಿಸಲಾಗುತ್ತದೆ. 10 ವರ್ಷಗಳ ಪಾಲಿಸಿ ಅವಧಿಗೆ ವಾರ್ಷಿಕ 40 ಸಾವಿರ ರೂಪಾಯಿಂತೆ ಗ್ಯಾರಂಟಿಡ್ ಅಡಿಶನ್ ಜಮೆಯಾಗುತ್ತದೆ. ಪಾಲಿಸಿಯ ಮಧ್ಯದಲ್ಲಿ ಪಾಲಿಸಿದಾರರು ದಿಢೀರನೆ ಮೃತಪಟ್ಟರೆ, ನಾಮಿನಿಗೆ ಸುಮಾರು 14.22 ರೂಪಾಯಿ ಲಕ್ಷ ಪಾವತಿಸಲಾಗುತ್ತದೆ.
ಒಂದು ವೇಳೆ ‘ಫ್ಲೆಕ್ಸಿ ಇನ್ಕಮ್’ ಆಯ್ಕೆ ಮಾಡಿಕೊಂಡಿದ್ದರೆ, ಜಮೆಯಾದ ಮೊತ್ತದಲ್ಲಿ ಶೇ.75ರಷ್ಟು ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯುವ ಸೌಲಭ್ಯವಿರುತ್ತದೆ. ಅಲ್ಲದೆ, ಉಳಿದ ಮೊತ್ತಕ್ಕೆ ಎಲ್ಐಸಿ ಶೇ.5.5ರಷ್ಟು ಬಡ್ಡಿ ನೀಡುತ್ತದೆ.
ಇದನ್ನೂ ಓದಿ : ಮಹೀಂದ್ರಾ ಕಂಪನಿಯಿಂದ ವಿದ್ಯಾರ್ಥಿಗಳಿಗೆ 6 ಸಾವಿರ ರೂ. ವಿದ್ಯಾರ್ಥಿವೇತನ : ಹೀಗೆ ಅರ್ಜಿ ಸಲ್ಲಿಸಿ



















