ಬೆಂಗಳೂರು: ಭಾರತದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಹೊಸ ಫೀಚರ್ ಬಿಡುಗಡೆ ಮಾಡಿದೆ. ಗ್ರಾಹಕರು ಇನ್ನುಮುಂದೆ ವಾಟ್ಸ್ಆ್ಯಪ್ ಮೂಲಕವೇ ಎಲ್ಐಸಿ ಪ್ರೀಮಿಯಂಅನ್ನು ಪಾವತಿಸಬಹುದಾಗಿದೆ. ಇಂತಹದ್ದೊಂದು ವಾಟ್ಸ್ಆ್ಯಪ್ ಬಾಟ್ ಅನ್ನು ಎಲ್ಐಸಿ ಆರಂಭಿಸಿದೆ. ಹಾಗಾದರೆ, ವಾಟ್ಸ್ಆ್ಯಪ್ ಮೂಲಕವೇ ಎಲ್ಐಸಿ ಪ್ರೀಮಿಯಂ ಪಾವತಿಸುವುದು ಹೇಗೆ? ಇಲ್ಲಿದೆ ಮಾಹಿತಿ.
ಎಲ್ಐಸಿ ನೀಡಿದ ಮಾಹಿತಿ ಪ್ರಕಾರ, ಎಲ್ಐಸಿ ಪೋರ್ಟಲ್ ನೋಂದಾಯಿತ ಗ್ರಾಹಕರು 8976862090 ನಂಬರ್ ಗೆ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿ ಬಾಕಿ ಇರುವ ಪಾಲಿಸಿಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದಾದ ನಂತರ ಆನ್ ಲೈನ್ನಲ್ಲಿಯೇ ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ಕಾರ್ಡ್ ಬಳಸಿ ಪಾವತಿ ಮಾಡಬಹುದು. ಪಾವತಿ ಮಾಡಿದ ರಸೀದಿಯನ್ನು ಕೂಡ ವಾಟ್ಸ್ಆ್ಯಪ್ ನಲ್ಲೇ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
ಈಗಾಗಲೇ ಕಸ್ಟಮರ್ ಪೋರ್ಟಲ್ ನಲ್ಲಿ ಸುಮಾರು 2.2 ಕೋಟಿಗೂ ಹೆಚ್ಚು ಪಾಲಿಸಿದಾರರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಗ್ರಾಹಕರು ಆನ್ಲೈನ್ ಸೇವೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರಿಗೆಲ್ಲ ಇನ್ನುಮುಂದೆ ಆನ್ ಲೈನ್ ಪೇಮೆಂಟ್ ಗೆ ವಾಟ್ಸ್ಆ್ಯಪ್ ನೆರವಾಗಲಿದೆ. ವಾಟ್ಸ್ಆ್ಯಪ್ ನಲ್ಲಿ 8976862090 ಮೊಬೈಲ್ ನಂಬರ್ ಗೆ ಗ್ರಾಹಕರು ‘HI’ ಎಂದು ಸಂದೇಶ ಕಳುಹಿಸುವ ಮೂಲಕ ಸೇವೆಯನ್ನು ಪಡೆಯಬಹುದಾಗಿದೆ.
ಎಲ್ಐಸಿ ಪೋರ್ಟಲ್ ಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?
- www.licindia.in ವೆಬ್ ಸೈಟ್ ಗೆ ಭೇಟಿ ನೀಡಿ
- ಕಸ್ಟಮರ್ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ.
- ಹೊಸದಾಗಿ ನೋಂದಣಿಗೆ ‘ನ್ಯೂ ಯೂಸರ್’ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಯ್ಕೆಯ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಆಯ್ಕೆ ಮಾಡಿ ಬಳಿಕ ಸಲ್ಲಿಸಿ.
- ಹೊಸದಾಗಿ ರಚಿಸಿದ ಯೂಸರ್ ಐಡಿಯೊಂದಿಗೆ ಲಾಗಿನ್ ಆಗಿ.
- ಆ್ಯಡ್ ಪಾಲಿಸಿ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಎಲ್ಲಾ ಪಾಲಿಸಿಗಳನ್ನು ಸೇರಿಸಿದ ಬಳಿಕ ನೋಂದಣಿ ಆಗುತ್ತದೆ.