ಬೆಂಗಳೂರು: ಇದೇನಿದ್ದರೂ ಡಿಜಿಟಲ್ ಜಮಾನ. ಯಾವುದೇ ವ್ಯಕ್ತಿಗೆ ಹಣ ಕಳುಹಿಸುವುದರಿಂದ ಹಿಡಿದು ಹತ್ತಾರು ಕೆಲಸಗಳನ್ನು ಮೊಬೈಲ್ ನಲ್ಲೇ ಮಾಡಬಹುದು. ಮೊಬೈಲ್ ರಿಚಾರ್ಜ್, ಟಿವಿ ರಿಚಾರ್ಜ್, ಕ್ರೆಡಿಟ್ ಕಾರ್ಡ್ ಬಿಲ್, ವಿದ್ಯುತ್ ಬಿಲ್ ಸೇರಿ ಯಾವುದೇ ಪಾವತಿಯನ್ನು ಆನ್ ಲೈನ್ ಮೂಲಕವೇ ಮಾಡಬಹುದು. ಆದರೆ, ಎಲ್ಐಸಿ, ಪೋಸ್ಟ್ ಆಫೀಸ್ ಎಂದಕೂಡಲೇ ಜನರಿಗೆ ಡಿಜಿಟಲ್ ವ್ಯವಸ್ಥೆ ನೆನಪಾಗುವುದಿಲ್ಲ. ಸರ್ಕಾರದ ಸಂಸ್ಥೆ ಎಂದು ಕಚೇರಿಗೆ ಹೋಗಲು ಮುಂದಾಗುತ್ತಾರೆ. ಆದರೆ, ಎಲ್ಐಸಿಯೂ ಈಗ ಡಿಜಿಟಲ್ ಆಗಿದ್ದು, ಯಾವುದೇ ಮಾಹಿತಿಯನ್ನು ಬೇಕಾದರೂ ಮನೆಯಲ್ಲೇ ಕುಳಿತು ಪಡೆಯಬಹುದಾಗಿದೆ.
ಎಲ್ಐಸಿ ಪಾಲಿಸಿ ಮಾಹಿತಿ ಹೀಗೆ ತಿಳಿಯಿರಿ
- ಈಗಾಗಲೇ ಎಲ್ಐಸಿ ಇಂಡಿಯಾದ ವೆಬ್ ಸೈಟ್ ನಲ್ಲಿ ಗ್ರಾಹಕ ಪೋರ್ಟಲ್ ಗೆ ನೋಂದಣಿ ಮಾಡಿಕೊಂಡಿದ್ದರೆ, ನಿಮ್ಮ ಕೆಲಸ ಇನ್ನಷ್ಟು ಸುಲಭ. ಇಲ್ಲದಿದ್ದರೆ ನೋಂದಣಿ ಮಾಡಿಕೊಳ್ಳಬೇಕು.
- ಮೊದಲು, ಅಧಿಕೃತ ವೆಬ್ ಸೈಟ್ ಆಗಿರುವ www.licindia.in ಗೆ ಹೋಗಿ.
- ಅಲ್ಲಿರುವ ‘Customer Portal’ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಿ.
- ಲಾಗಿನ್ ಆದ ತಕ್ಷಣ, ‘Policy Status’ ಅನ್ನೋ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಹೆಸರಿನಲ್ಲಿರುವ ಎಲ್ಲ ಪಾಲಿಸಿಗಳ ಪಟ್ಟಿ ತೆರೆದುಕೊಳ್ಳುತ್ತದೆ.
ಇದಾದ ಬಳಿಕ ನೀವು, ಯಾವ ಪಾಲಿಸಿಯ ವಿವರ ಬೇಕೋ, ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಪ್ರೀಮಿಯಂ ಕಟ್ಟೋಕೆ ಕೊನೆ ದಿನ ಯಾವಾಗ, ಎಷ್ಟು ಬೋನಸ್ ಜಮಾ ಆಗಿದೆ, ಪಾಲಿಸಿ ಮೆಚೂರ್ ಆಗೋದು ಯಾವಾಗ, ಪಾಲಿಸಿ ಮೇಲೆ ಸಾಲ ಸಿಗುತ್ತದೆಯೇ ಎಂಬಂತಹ ಎಲ್ಲಾ ಮಾಹಿತಿ ನಿಮ್ಮ ಕಣ್ಣಮುಂದೆ ಇರುತ್ತದೆ. ಬೇಕಿದ್ದರೆ, ಪಾಲಿಸಿಯ ಸ್ಟೇಟ್ಮೆಂಟ್ ಅನ್ನು ಪಿಡಿಎಫ್ ರೂಪದಲ್ಲಿ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು.
ಎಲ್ಐಸಿ ಪಾಲಿಸಿ ಸ್ಟೇಟಸ್ ಮಾತ್ರವಲ್ಲ, ಫೋನ್ ಪೇ ಸೇರಿ ಹಲವು ಆ್ಯಪ್ ಗಳ ಮೂಲಕವೇ ಎಲ್ಐಸಿ ಪಾಲಿಸಿ ಮೊತ್ತವನ್ನು ಕೂಡ ಪಾವತಿಸಬಹುದಾಗಿದೆ. ಅಷ್ಟರಮಟ್ಟಿಗೆ ಸರ್ಕಾರಿ ಸಂಸ್ಥೆಯಾಗಿರುವ ಎಲ್ಐಸಿಯು ಹೆಚ್ಚು ಡಿಜಿಟಲ್ ಆಗಿದೆ.