ಬೆಂಗಳೂರು: ಸಾರ್ವಜನಿಕ ವಲಯದ, ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಎಲ್ಐಸಿಯು ಎರಡು ಹೊಸ ವಿಮಾ ಯೋಜನೆಗಳನ್ನು ಆರಂಭಿಸಿದೆ. ಅದರಲ್ಲೂ, ವಿಮೆಯ ಜತೆಗೆ ಉಳಿತಾಯ, ಹೂಡಿಕೆಯ ಅವಕಾಶಗಳನ್ನೂ ನೀಡಿದೆ. ನವ ಜೀವನ್ ಶ್ರೀ ಮತ್ತು ನವ ಜೀವನ್ ಶ್ರೀ ಸಿಂಗಲ್ ಪ್ರೀಮಿಯಂ ಎಂಬ ಪಾಲಿಸಿಗಳನ್ನು ಪರಿಚಯಿಸಿದ್ದು, ಇವುಗಳ ಪ್ರಯೋಜನಗಳು ಏನೇನು ಎಂಬುದರ ಮಾಹಿತಿ ಇಲ್ಲಿದೆ.
ನಿವೃತ್ತಿ ಯೋಜನೆ ರೂಪಿಸುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದೊಂದಿಗೆ LIC ನವ ಜೀವನ್ ಶ್ರೀ ಪಾಲಿಸಿಯನ್ನು ತಂದಿದೆ. 30 ದಿನದ ಮಗುವಿನಿಂದ 60 ವರ್ಷ ವಯಸ್ಸಿನವರು ಕೂಡ ಈ ಪಾಲಿಸಿಯನ್ನು ಖರೀದಿಸಬಹುದು. ಪ್ರೀಮಿಯಂ ಪಾವತಿ ಸೀಮಿತವಾಗಿರುತ್ತದೆ. 6, 8, 10, 12 ವರ್ಷಗಳ ಅವಧಿಗೆ ಪ್ರೀಮಿಯಂ ಪಾವತಿಸಬಹುದು.
ಆಯ್ಕೆ ಮಾಡಿದ ಪ್ರೀಮಿಯಂ ಪಾವತಿ ಅವಧಿಯನ್ನು ಅವಲಂಬಿಸಿ, ಪಾಲಿಸಿ ಅವಧಿಯನ್ನು 10-16 ವರ್ಷಗಳು ಎಂದು ಆಯ್ಕೆ ಮಾಡಿಕೊಳ್ಳಬಹುದು. ಈ ಪಾಲಿಸಿಯು ಗರಿಷ್ಠ 20 ವರ್ಷ ಕಾಲ ಮುಂದುವರಿಯುತ್ತದೆ. ಈ ಪಾಲಿಸಿಯ ಕನಿಷ್ಠ ಸಮ್ ಅಶ್ಯೂರ್ಡ್ 5 ಲಕ್ಷ ರೂಪಾಯಿಯಷ್ಟಿದ್ದು, ಗರಿಷ್ಠ ಯಾವುದೇ ಮಿತಿಯಿಲ್ಲ. ಈ ಪಾಲಿಸಿಗೆ ಖಾತರಿಪಡಿಸಿದ ಸೇರ್ಪಡೆಗಳು ಅನ್ವಯಿಸುತ್ತವೆ. ಇದು ಪಾಲಿಸಿ ಅವಧಿಯನ್ನು ಅವಲಂಬಿಸಿರುತ್ತದೆ. ನೀವು ಪಾವತಿಸಿದ ಪ್ರೀಮಿಯಂನ 8.50% ರಿಂದ 9.50% ರಷ್ಟು ಇರುತ್ತದೆ. ನೀವು ಪ್ರೀಮಿಯಂ ಅನ್ನು ಮಾಸಿಕ, 3 ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ, ಅಥವಾ ವರ್ಷಕ್ಕೊಮ್ಮೆ ಪಾವತಿಸಬಹುದು.
ಒಮ್ಮೆಯೇ ದೊಡ್ಡ ಮೊತ್ತವನ್ನು ಅಂದರೆ, ಸಿಂಗಲ್ ಪ್ರೀಮಿಯಂ ಆಗಿ ಪಾವತಿಸಲು ಇಚ್ಛಿಸುವವರಿಗಾಗಿ LIC ನವ ಜೀವನ್ ಶ್ರೀ ಸಿಂಗಲ್ ಪ್ರೀಮಿಯಂ ಪಾಲಿಸಿಯನ್ನು ಪರಿಚಯಿಸಿದೆ. ಇದರಲ್ಲಿ ಕನಿಷ್ಠ ಪ್ರೀಮಿಯಂ 1 ಲಕ್ಷ ರೂಪಾಯಿ ಇರುತ್ತದೆ. ಪ್ರೀಮಿಯಂನ 10 ಪಟ್ಟು ವಿಮಾ ರಕ್ಷಣೆ ಇರುತ್ತದೆ. ಗರಿಷ್ಠ ಪ್ರೀಮಿಯಂ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.
30 ದಿನದ ಮಗುವಿನಿಂದ ಹಿಡಿದು 60 ವರ್ಷ ವಯಸ್ಸಿನವರು ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪಾಲಿಸಿಯ ಕನಿಷ್ಠ ಅವಧಿ 5 ವರ್ಷ. ಗರಿಷ್ಠ 20 ವರ್ಷ ಅವಧಿಗೆ ಪಾಲಿಸಿಯನ್ನು ಖರೀದಿಸಬಹುದು. ಪ್ರತಿ 1000 ರೂಪಾಯಿಗಳಿಗೆ 85 ರೂಪಾಯಿಗಳಂತೆ ಖಾತರಿಪಡಿಸಿದ ಸೇರ್ಪಡೆಗಳು ಇರುತ್ತವೆ.
ಹಲವು ರೀತಿಯಲ್ಲಿ ಉಪಯೋಗ
ನವ ಜೀವನ್ ಶ್ರೀ ಮತ್ತು ನವ ಜೀವನ್ ಶ್ರೀ ಸಿಂಗಲ್ ಪ್ರೀಮಿಯಂ ಪಾಲಿಸಿಗಳಿಗೂ ಆಕಸ್ಮಿಕ ಮರಣ ಪ್ರಯೋಜನ ರೈಡರ್, ನ್ಯೂ ಟರ್ಮ್ ಅಶ್ಯುರೆನ್ಸ್, ಪ್ರೀಮಿಯಂ ಮನ್ನಾ ಸೇರಿ ಮುಂತಾದವುಗಳನ್ನು ಸೇರಿಸಿಕೊಳ್ಳಬಹುದು. ಹೆಚ್ಚುವರಿ ಪ್ರಯೋಜನಗಳು ಬೇಕಾಗುವವರು ಪ್ರೀಮಿಯಂ ಅನ್ನು ಸ್ವಲ್ಪ ಹೆಚ್ಚು ಪಾವತಿಸಬೇಕಾಗುತ್ತದೆ.


















