ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ನಿವೃತ್ತಿ ಬಳಿಕ ಯಾವುದೇ ಪಿಂಚಣಿ ಭದ್ರತೆ ಇರುವುದಿಲ್ಲ. ಅವರು ಉಳಿತಾಯ, ಹೂಡಿಕೆ ಮೂಲಕವೇ ನಿವೃತ್ತಿ ಜೀವನಕ್ಕೆ ಪ್ಲಾನ್ ಮಾಡಬೇಕು. ಹೀಗೆ ನಿವೃತ್ತಿ ನಂತರ ಒಳ್ಳೆಯ ಪಿಂಚಣಿ ಬರಬೇಕು ಎಂದರೆ, ಎಲ್ಐಸಿಯ ಜೀವನ್ ಉತ್ಸವ್ ಉತ್ತಮ ಯೋಜನೆಯಾಗಿದೆ.
ಹೌದು, ಎಲ್ಐಸಿಯ ಜೀವನ್ ಉತ್ಸವ್ ಯೋಜನೆಯಲ್ಲಿ ನೀವು 5 ಲಕ್ಷ ರೂ. ವಿಮಾ ಮೊತ್ತದ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ, 10 ವರ್ಷದ ಬಳಿಕ ನಿಮಗೆ ವರ್ಷಕ್ಕೆ 50 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಇದೂ ಜೀವನ ಪೂರ್ತಿ ಪಾಲಿಸಿದಾರರ ಖಾತೆಗೆ ಜಮೆಯಾಗುತ್ತಲೇ ಇರುತ್ತದೆ. 5 ವರ್ಷಗಳ ಪ್ರೀಮಿಯಂ ಅವಧಿಗೆ ತೆಗೆದುಕೊಂಡರೆ, ವಾರ್ಷಿಕ ಸುಮಾರು 1.16 ಲಕ್ಷದಂತೆ 5 ವರ್ಷ ಕಟ್ಟಬೇಕು. ನಂತರ, 5 ವರ್ಷಗಳ ಕಾಯುವಿಕೆ ಅವಧಿ ಇರುತ್ತದೆ. ಅಂದರೆ, ಪಾಲಿಸಿ ಆರಂಭವಾಗಿ 10 ವರ್ಷಗಳು ಪೂರ್ಣಗೊಳ್ಳಬೇಕು.
ಜೀವನ್ ಉತ್ಸವ್ ಯೋಜನೆಯ ಅತ್ಯಂತ ದೊಡ್ಡ ಆಕರ್ಷಣೆ ಎಂದರೆ, ಈ 50,000 ರೂಪಾಯಿ ನಿಮಗೆ ಒಂದು ಅಥವಾ ಎರಡು ವರ್ಷವಲ್ಲ, ನೀವು ಬದುಕಿರುವವರೆಗೂ ಪ್ರತಿ ವರ್ಷ ತಪ್ಪದೆ ಸಿಗುತ್ತದೆ. ಹಾಗಾಗಿ, ನಿವೃತ್ತಿ ಬಳಿಕ ಇದು ಒಳ್ಳೆಯ ಪಿಂಚಣಿ ಆಗಲಿದೆ. ಹಾಗಾಗಿ, ಕಡಿಮೆ ವರ್ಷ ಪ್ರೀಮಿಯಂ ಕಟ್ಟಿ, ಜೀವನಪೂರ್ತಿ ಗ್ಯಾರಂಟಿ ಆದಾಯ ಪಡೆಯಲು ‘ಜೀವನ್ ಉತ್ಸವ್’ ಒಂದು ಅತ್ಯುತ್ತಮ ಯೋಜನೆಯಾಗಿದೆ.
ಇದರ ಜತೆಗೆ, ಪ್ರತಿ ವರ್ಷ ಬರುವ ಈ ಹಣವನ್ನು ನೀವು ತೆಗೆದುಕೊಳ್ಳದೆ ಎಲ್ಐಸಿಯಲ್ಲೇ ಉಳಿಸಿದರೆ, ಅದಕ್ಕೆ ವಾರ್ಷಿಕ 5.5% ಚಕ್ರಬಡ್ಡಿ ಸಿಗುತ್ತದೆ. ಇದರಿಂದ ನಿಮ್ಮ ಹಣ ಮತ್ತಷ್ಟು ಬೆಳೆದು ದೊಡ್ಡ ಮೊತ್ತವಾಗಿ ಪರಿವರ್ತನೆಯಾಗುತ್ತದೆ. ಅಕಸ್ಮಾತ್, ಪಾಲಿಸಿದಾರ ಸಾವಿಗೀಡಾದರೆ, ನಾಮಿನಿಗೆ ವಿಮಾ ಮೊತ್ತ ಹಾಗೂ ಪರಿಹಾರ ಸಿಗುತ್ತದೆ.



















