ಬೆಂಗಳೂರು: ದೇಶದಲ್ಲೇ ಬೃಹತ್ ಹಾಗೂ ವಿಶ್ವಾಸಾರ್ಹ ವಿಮಾ ಕಂಪನಿಯಾಗಿರುವ ಎಲ್ಐಸಿಯು 2025ನೇ ಸಾಲಿಗೆ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗಾದರೆ, ಎಲ್ಐಸಿಯ ಗೋಲ್ಡನ್ ಜುಬಿಲಿ ಸ್ಕಾಲರ್ ಶಿಪ್ ಯೋಜನೆಗೆ (LIC Golden Jubilee Scholarship Scheme) ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ.
ವೃತ್ತಿಪರ ಕೋರ್ಸ್ ಗಳಿಗೆ ಸೇರಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 15 ಸಾವಿರ ರೂ.ನಿಂದ 40 ಸಾವಿರ ರೂಪಾಯಿವರೆಗೆ ಸ್ಕಾಲರ್ ಶಿಪ್ ಸಿಗುತ್ತದೆ. ಅಂದರೆ, 2025–26 ರಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಪದವಿ, ಡಿಪ್ಲೊಮಾ, ವೃತ್ತಿಪರ ಅಥವಾ ಐಟಿಐ ಕೋರ್ಸ್ಗಳ ಮೊದಲ ವರ್ಷಕ್ಕೆ ದಾಖಲಾದವರಿಗೆ ವಿದ್ಯಾರ್ಥಿವೇತನ ಸಿಗುತ್ತದೆ. ಆದರೆ, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರ ಆದಾಯ 4.5 ಲಕ್ಷ ರೂ. ಮೀರಿರಬಾರದು ಎಂದು ತಿಳಿಸಲಾಗಿದೆ.
ಯಾರಿಗೆ ಎಷ್ಟು ಸ್ಕಾಲರ್ ಶಿಪ್?
- ವೈದ್ಯಕೀಯ (MBBS, BAMS, BHMS, BDS): ವಾರ್ಷಿಕ 40,000 ರೂ.
- ಎಂಜಿನಿಯರಿಂಗ್ (ಬಿಇ, ಬಿ.ಟೆಕ್, ಬಿ.ಆರ್ಕ್): ವಾರ್ಷಿಕ 30,000 ರೂ.
- ಪದವಿ, ಡಿಪ್ಲೊಮಾ, ವೃತ್ತಿಪರ ಮತ್ತು ಐಟಿಐ ಕೋರ್ಸ್ ಗಳು: ವಾರ್ಷಿಕ 20,000 ರೂ.
- ಹೆಣ್ಣು ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ (ಹತ್ತನೇ ತರಗತಿ ನಂತರ): ವಾರ್ಷಿಕ 15,000 ರೂ.
ಅರ್ಜಿ ಸಲ್ಲಿಸೋದು ಹೇಗೆ?
ಎಲ್ಐಸಿಯ ಅಧಿಕೃತ ವೆಬ್ಸೈಟ್ಗೆ https://www.licindia.in/ ಭೇಟಿ ನೀಡಿ ಮತ್ತು ವಿದ್ಯಾರ್ಥಿವೇತನ ವಿಭಾಗಕ್ಕೆ ತೆರಳಬೇಕು. ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಅರ್ಜಿ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆಯಾಗುತ್ತದೆ.