ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರವೊಂದನ್ನು ಬರೆದಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತದ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಗೆ ಶ್ರೀರಾಮನ ಆದರ್ಶವನ್ನು ಪತ್ರದಲ್ಲಿ ಉದಾಹರಿಸಿದ್ದಾರೆ. ಭಾರತವು ಕೇವಲ ಧರ್ಮವನ್ನು ಎತ್ತಿಹಿಡಿಯಲಿಲ್ಲ, ಬದಲಿಗೆ ಅನ್ಯಾಯದ ವಿರುದ್ಧ ಪ್ರತೀಕಾರವನ್ನೂ ತೀರಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
“ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣದ ನಂತರ ಇದು ಎರಡನೇ ದೀಪಾವಳಿ. ಭಗವಾನ್ ಶ್ರೀರಾಮನು ನಮಗೆ ಧರ್ಮವನ್ನು ಎತ್ತಿಹಿಡಿಯಲು ಕಲಿಸುತ್ತಾನೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯವನ್ನು ನೀಡುತ್ತಾನೆ. ಕೆಲವು ತಿಂಗಳ ಹಿಂದೆ ‘ಆಪರೇಷನ್ ಸಿಂದೂರ’ದ ಸಮಯದಲ್ಲಿ ನಾವು ಇದರ ಜೀವಂತ ಉದಾಹರಣೆಯನ್ನು ನೋಡಿದ್ದೇವೆ” ಎಂದು ಮೇ 7 ರಿಂದ 10ರವರೆಗೆ ನಡೆದ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
ಇದಲ್ಲದೆ, “ಈ ವರ್ಷದ ದೀಪಾವಳಿಯು ವಿಶೇಷವಾಗಿದೆ. ಏಕೆಂದರೆ ಹಲವಾರು ಜಿಲ್ಲೆಗಳನ್ನು ನಕ್ಸಲ್ ಮುಕ್ತಗೊಳಿಸಲಾಗಿದ್ದು, ಅಂತಹ ಜಿಲ್ಲೆಗಳಲ್ಲೂ ಇದೇ ಮೊದಲ ಬಾರಿಗೆ ದೀಪಗಳನ್ನು ಬೆಳಗಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲಾಗಿದೆ” ಎಂದು ಪ್ರಧಾನಿ ತಿಳಿಸಿದ್ದಾರೆ. ಇತ್ತೀಚೆಗೆ 300ಕ್ಕೂ ಹೆಚ್ಚು ನಕ್ಸರರು ಶರಣಾಗಿರುವುದನ್ನು ಉಲ್ಲೇಖಿಸಿ, “ಹಲವರು ಹಿಂಸೆಯ ಮಾರ್ಗವನ್ನು ತ್ಯಜಿಸಿ, ದೇಶದ ಸಂವಿಧಾನದಲ್ಲಿ ನಂಬಿಕೆ ವ್ಯಕ್ತಪಡಿಸಿ, ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿರುವುದು ರಾಷ್ಟ್ರದ ಒಂದು ದೊಡ್ಡ ಸಾಧನೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಜಾಗತಿಕ ಸಂಘರ್ಷಗಳ ನಡುವೆ ಭಾರತವು ಸ್ಥಿರತೆ ಮತ್ತು ಸಂವೇದನಾಶೀಲತೆಯ ಸಂಕೇತವಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ನಾವು ಸಾಗುತ್ತಿದ್ದೇವೆ. ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ ನಿರ್ಮಾಣದ ಪಯಣದಲ್ಲಿ ನಮ್ಮ ಕರ್ತವ್ಯಗಳನ್ನು ಪೂರೈಸುವುದು ನಾಗರಿಕರಾದ ನಮ್ಮೆಲ್ಲರ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಈ ಐತಿಹಾಸಿಕ ಸಾಧನೆಗಳ ನಡುವೆ, ದೇಶವು ಮುಂದಿನ ಪೀಳಿಗೆಯ ಸುಧಾರಣೆಗಳಿಗೂ ಮುಂದಾಗಿದೆ. ನವರಾತ್ರಿಯ ಮೊದಲ ದಿನದಂದು ಜಾರಿಗೆ ತಂದ ಜಿಎಸ್‌ಟಿ ಕಡಿತದಿಂದ ‘ಜಿಎಸ್‌ಟಿ ಉಳಿತಾಯ ಉತ್ಸವ’ದ ಸಮಯದಲ್ಲಿ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಪತ್ರದ ಪೂರ್ಣಪಾಠ ಇಲ್ಲಿದೆ: ಪ್ರಿಯ ದೇಶಬಾಂಧವರೇ, ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ ದೀಪಾವಳಿಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣದ ನಂತರ ಇದು ಎರಡನೇ ದೀಪಾವಳಿ. ಭಗವಾನ್ ಶ್ರೀರಾಮನು ನಮಗೆ ಧರ್ಮವನ್ನು ಎತ್ತಿಹಿಡಿಯಲು ಕಲಿಸುತ್ತಾನೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವಂಥ ಶಕ್ತಿಯನ್ನು ನೀಡುತ್ತಾನೆ. ಕೆಲವು ತಿಂಗಳ ಹಿಂದೆ ‘ಆಪರೇಷನ್ ಸಿಂದೂರ’ದ ಸಮಯದಲ್ಲಿ ನಾವು ಇದರ ಜೀವಂತ ಉದಾಹರಣೆಯನ್ನು ನೋಡಿದ್ದೇವೆ. ‘ಆಪರೇಷನ್ ಸಿಂದೂರ’ದ ವೇಳೆ ಭಾರತವು ಕೇವಲ ಧರ್ಮವನ್ನಷ್ಟೇ ಎತ್ತಿಹಿಡಿಯಲಿಲ್ಲ, ಅನ್ಯಾಯಕ್ಕೆ ತಕ್ಕ ಪ್ರತೀಕಾರವನ್ನೂ ತೀರಿಸಿಕೊಂಡಿತು.
ಈ ದೀಪಾವಳಿ ವಿಶೇಷವಾಗಿದೆ, ಏಕೆಂದರೆ ದೇಶದಾದ್ಯಂತ ನಕ್ಸಲ್ ಪೀಡಿತವಾಗಿದ್ದ ಕುಗ್ರಾಮಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದೇ ಮೊದಲ ಬಾರಿಗೆ ದೀಪಗಳನ್ನು ಬೆಳಗಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ, ಅನೇಕ ವ್ಯಕ್ತಿಗಳು ಹಿಂಸೆಯ ಮಾರ್ಗವನ್ನು ತ್ಯಜಿಸಿ, ನಮ್ಮ ದೇಶದ ಸಂವಿಧಾನದಲ್ಲಿ ನಂಬಿಕೆಯಿರಿಸಿ, ಮುಖ್ಯವಾಹಿನಿಗೆ ಸೇರುತ್ತಿರುವುದನ್ನು ನಾವು ನೋಡಿದ್ದೇವೆ. ಇದು ರಾಷ್ಟ್ರದ ಒಂದು ದೊಡ್ಡ ಸಾಧನೆಯಾಗಿದೆ.
ಈ ಐತಿಹಾಸಿಕ ಸಾಧನೆಗಳ ನಡುವೆ, ದೇಶವು ಇತ್ತೀಚಿನ ದಿನಗಳಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳಿಗೂ ಮುಂದಾಗಿದೆ. ನವರಾತ್ರಿಯ ಮೊದಲ ದಿನದಂದು, ಕಡಿಮೆ ಜಿಎಸ್‌ಟಿ ದರಗಳನ್ನು ಜಾರಿಗೆ ತರಲಾಯಿತು. ಈ ‘ಜಿಎಸ್‌ಟಿ ಉಳಿದಾಯ ಉತ್ಸವ’ದ ಸಮಯದಲ್ಲಿ, ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡುತ್ತಿದ್ದಾರೆ.
ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ಭಾರತವು ಸ್ಥಿರತೆ ಮತ್ತು ಸಂವೇದನಾಶೀಲತೆಯ ಸಂಕೇತವಾಗಿ ಹೊರಹೊಮ್ಮಿದೆ. ನಾವು ಮುಂದಿನ ದಿನಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ.
ಈ ‘ವಿಕಸಿತ ಭಾರತ್’ (ಅಭಿವೃದ್ಧಿ ಹೊಂದಿದ ಭಾರತ) ಮತ್ತು ‘ಆತ್ಮನಿರ್ಭರ ಭಾರತ್’ (ಸ್ವಾವಲಂಬಿ ಭಾರತ) ಪಯಣದಲ್ಲಿ, ರಾಷ್ಟ್ರಕ್ಕಾಗಿ ನಮ್ಮ ಕರ್ತವ್ಯಗಳನ್ನು ಪೂರೈಸುವುದು ನಾಗರಿಕರಾದ ನಮ್ಮೆಲ್ಲರ ಪ್ರಾಥಮಿಕ ಜವಾಬ್ದಾರಿಯಾಗಿದೆ.
ನಾವು ‘ಸ್ವದೇಶಿ’ (ಸ್ಥಳೀಯ ಉತ್ಪನ್ನಗಳು) ಅಳವಡಿಸಿಕೊಳ್ಳೋಣ ಮತ್ತು “ಇದು ಸ್ವದೇಶಿ!” ಎಂದು ಹೆಮ್ಮೆಯಿಂದ ಹೇಳೋಣ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಸ್ಫೂರ್ತಿಯನ್ನು ಉತ್ತೇಜಿಸೋಣ. ಎಲ್ಲಾ ಭಾಷೆಗಳನ್ನು ಗೌರವಿಸೋಣ. ಸ್ವಚ್ಛತೆಯನ್ನು ಕಾಪಾಡೋಣ. ನಮ್ಮ ಆರೋಗ್ಯಕ್ಕೆ ಆದ್ಯತೆ ನೀಡೋಣ. ನಮ್ಮ ಆಹಾರದಲ್ಲಿ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡೋಣ ಮತ್ತು ಯೋಗಾಭ್ಯಾಸವನ್ನು ಮೈಗೂಡಿಸಿಕೊಳ್ಳೋಣ. ಈ ಎಲ್ಲಾ ಪ್ರಯತ್ನಗಳು ನಮ್ಮನ್ನು ಶೀಘ್ರವಾಗಿ ‘ವಿಕಸಿತ ಭಾರತ’ದ ಕಡೆಗೆ ಕೊಂಡೊಯ್ಯುತ್ತವೆ.
ಒಂದು ದೀಪವು ಮತ್ತೊಂದು ದೀಪವನ್ನು ಬೆಳಗಿದಾಗ ಅದರ ಬೆಳಕು ಕಡಿಮೆಯಾಗುವುದಿಲ್ಲ, ಬದಲಾಗಿ ಮತ್ತಷ್ಟು ಹೆಚ್ಚುತ್ತದೆ ಎಂಬುದನ್ನು ದೀಪಾವಳಿ ನಮಗೆ ಕಲಿಸುತ್ತದೆ. ಅದೇ ಸ್ಫೂರ್ತಿಯೊಂದಿಗೆ, ಈ ದೀಪಾವಳಿಯಂದು ನಮ್ಮ ಸಮಾಜ ಮತ್ತು ಸುತ್ತಮುತ್ತಲಲ್ಲಿ ಸಾಮರಸ್ಯ, ಸಹಕಾರ ಮತ್ತು ಸಕಾರಾತ್ಮಕತೆಯ ದೀಪಗಳನ್ನು ಬೆಳಗಿಸೋಣ.
ಮತ್ತೊಮ್ಮೆ, ನಿಮ್ಮೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ತಮ್ಮ ವಿಶ್ವಾಸಿ, ನರೇಂದ್ರ ಮೋದಿ