ಹಾವೇರಿ: ಬಜೆಟ್ ಕುರಿತು ಸಿಎಂ ಸಿದ್ದರಾಮಯ್ಯ (Siddaramaiah) ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವರ್ಷದ ಬಜೆಟ್ ನಲ್ಲಿ ಮೀಸಲಿಟ್ಟ ಹಣವೆಷ್ಟು, ಖರ್ಚಾಗಿರುವ ಹಣವೆಷ್ಟು ಎನ್ನುವುದನ್ನು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ ವಿಫಲವಾಗಿದೆ ಎನ್ನುವುದನ್ನು ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಘಟಕ ಸಿದ್ಧರಾಗಬೇಕು ಎಂದು ಸೂಚಿಸಲಾಗುವುದು ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕ್ಲೀನ್ಚಿಟ್ ನೀಡಿರುವುದು ನಿರೀಕ್ಷಿತವಾಗಿದೆ. ಲೋಕಾಯುಕ್ತ ಸಿಎಂ ವಿರುದ್ಧ ಮೃದು ಧೋರಣೆ ತಾಳಿದೆ. ಇಡಿ ತನಿಖೆಯ ಬಗ್ಗೆ ಕೋರ್ಟ್ ತೀರ್ಮಾನ ಮಾಡಬೇಕಿದೆ. ಈ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕೂಡ ಕೋರ್ಟ್ನಲ್ಲಿ ಪರಿಶೀಲನೆ ಆಗಲಿದೆ ಎದು ಹೇಳಿದ್ದಾರೆ.
ಪೂರ್ವ ತಯಾರಿ ಇಲ್ಲದೇ ರಾಜಕೀಯ ಲಾಭಕ್ಕಾಗಿ ಮಾಡಿರುವ ಗ್ಯಾರಂಟಿ ಯೋಜನೆಗಳು ಕುಂಟುವುದು ಸಹಜ. ಗೃಹಲಕ್ಷ್ಮಿ ಯೋಜನೆಗೆ ಅತಿ ಹೆಚ್ಚು ಖರ್ಚಾಗುತ್ತಿದೆ. ಅದನ್ನು ಎರಡು ಮೂರು ತಿಂಗಳು ನಿಲ್ಲಿಸಿದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಈ ರೀತಿ ಹಣ ಹಾಕುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಮಾತು ಕೊಟ್ಟಂತೆ ಗ್ಯಾರಂಟಿ ಹಣ ಬಿಡುಗಡೆ ಮಾಡಬೇಕು. ಇಂಧನ ಸಚಿವ ಜಾರ್ಜ್ ಇದೇನು ಸಂಬಳವೇ ಎಂದು ಹೇಳಿದ್ದಾರೆ. ಇದು ಸಂಬಳ ಅಲ್ಲ ಗೌರವ ಧನ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ, ಗೌರವ ಧನವನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ಹೆಣ್ಣುಮಕ್ಕಳಿಗೆ ಗೌರವ ನೀಡಿಲ್ಲ ಎಂದು ಅರ್ಥ ಎಂದು ಗುಡುಗಿದ್ದಾರೆ.