ಬೆಂಗಳೂರು : ಬಿಜೆಪಿಯಿಂದ ಉಚ್ಛಾಟನೆ ಆಗಿರುವ ಯತ್ನಾಳ್ ಮೊದಲು ಯಾಕೆ ಉಚ್ಛಾಟನೆ ಆದರು ಎಂದು ತಿಳಿದುಕೊಳ್ಳಲಿ. ಅಮೇಲೆ ನಮ್ಮ ಪಕ್ಷ, ನಮ್ಮ ಅಧ್ಯಕ್ಷರು, ನಮ್ಮ ಸಿಎಂ ಬಗ್ಗೆ ಮಾತನಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಬಿಜೆಪಿ ಹೋಗುವುದಕ್ಕೆ ಸಿದ್ಧತೆ ಮಾಡಿದ್ದರು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯಲ್ಲಿರುವವರಿಗೆ ಸ್ವಂತಕ್ಕೆ ಅಸೆಸ್‌ಮೆಂಟ್ ಮಾಡುವುದಕ್ಕೆ ಆಗಿಲ್ಲ. ಅವರು ಬಿಜೆಪಿಯಲ್ಲಿ ಉಳಿಯುತ್ತಾರೊ ಇಲ್ಲವೋ ಅವರಿಗೇ ಗೊತ್ತಿಲ್ಲ. ಅವರು ನಮ್ಮ ಅಧ್ಯಕ್ಷರ ಬಗ್ಗೆ ವಿಮರ್ಶೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಯಾಕೆ ಹೊರಗೆ ಹೋಗಿದ್ದಾರೆ ಎನ್ನುವುದು ಇನ್ನೂ ಅವರಿಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಯಾರು ಹೊರಗೆ ಹೋಗುತ್ತಾರೆ, ಒಳಗೆ ಬರುತ್ತಾರೆ ಎನ್ನುವುದು ಅವರಿಗೆ ಗೊತ್ತಾಗುತ್ತದೆಯೇ? ಅವರು “ಸೆಲ್ಫ್ ಅಸೆಸ್‌ಮೆಂಟ್” ಅಲ್ಲೇ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯತ್ನಾಳ್ ಅವರನ್ನು ಪಕ್ಷದಿಂದಲೇ ತೆಗೆದು ಹಾಕಿದ್ದಾರೆ. ಯಾಕೆ ಅವರನ್ನು ಹೊರಗೆ ಹಾಕಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ. ಅವರ ಮಾತಿಗೆ ಹೆಚ್ಚು ಬೆಲೆ ಕೊಡಬೇಡಿ. ಬಿಜೆಪಿಯಲ್ಲಿಯೇ ಅವರ ಮಾತಿಗೆ ಬೆಲೆ ಕೊಟ್ಟಿಲ್ಲ. ಇನ್ನು ನಮ್ಮ ಬಗ್ಗೆ ಮಾತನಾಡಿದರೆ ಯಾಕೆ ಬೆಲೆ ಕೊಡುತ್ತೀರಾ ? ಎಂದು ಹೇಳಿದ್ದಾರೆ.