ಮಂಡ್ಯ: ಸರ್ಕಾರವು ಖಾಸಗಿ ಶಾಲೆಗಳು, ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದನ್ನು ನಿಲ್ಲಿಸಬೇಕು ಎಂದು ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು ಚನ್ನಬಸಪ್ಪ ಹಕ್ಕೊತ್ತಾಯ ಮಂಡಿಸಿದ್ದಾರೆ.
ಮಂಡ್ಯದಲ್ಲಿ (Mandya) ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಸಮೃದ್ಧ, ಶ್ರೀಮಂತವಾಗಿ ಬೆಳೆಯುತ್ತಿದೆ.
ಕನ್ನಡ ವಿಸ್ತಾರವಾಗುತ್ತಿದೆ. ಕನ್ನಡ ಉಸಿರಾಗಬೇಕು. ಅದು ಕೇವಲ ಮಾತಿನಲ್ಲಿ ಮಾತ್ರ ಇರಬಾರದು. ಪ್ರತಿಯೊಬ್ಬರ ಎದೆಯಲ್ಲೂ ಉಸಿರಾಗಿ ನಿಲ್ಲಬೇಕು. ಆದರೆ ಬಳಕೆ ಆಗುತ್ತಿಲ್ಲ. ಬಳಸಿದಷ್ಟು ನಮ್ಮ ಕನ್ನಡ ಭಾಷೆ ಬೆಳೆಯುತ್ತದೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಇರಬೇಕು. ನಾಡಿನ ಪ್ರತಿ ಮಕ್ಕಳಿಗೆ ಶಿಕ್ಷಣ ದೊರಕಿಸಲು ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರವು ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು. ಖಾಸಗಿ ಶಾಲೆಗಳಿಗೆ ಆಂಗ್ಲ ಮಾಧ್ಯಮ ತೆರೆಯಲು ಅನುಮತಿಗೆ ಸರ್ಕಾರ ತಡೆ ನೀಡಬೇಕು. ಗ್ರಾಮೀಣ ಭಾಗದ ಶಾಲೆಗಳಿಗೆ ಸೂರುಗಳು ಇಲ್ಲವಾಗಿದೆ.
ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕನ್ನಡ ಶಾಲೆಗಳ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕು. ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದರೂ ಕನ್ನಡ ಶಾಲೆ ಮುಚ್ಚಬಾರದು. ಕನ್ನಡ ನಾಡಿನಲ್ಲಿ ಭಾರತಕ್ಕೆ ಮಾದರಿಯಾಗುವ ಶಿಕ್ಷಣ ಕ್ರಮವನ್ನು ಜಾರಿ ಮಾಡಬೇಕು. ಆಗ ಸಮಾನ ಶಿಕ್ಷಣ ದೊರೆಯುತ್ತದೆ ಎಂದು ಹೇಳಿದ್ದಾರೆ.