ಬೆಂಗಳೂರು: ಯುಪಿಎಸ್ಸಿಯಂತೆ ಕರ್ನಾಟಕ ಲೋಕ ಸೇವಾ ಆಯೋಗ ಕಾರ್ಯನಿರ್ವಹಿಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ನಡೆದ ವಿವಿಧ ನೇಮಕಾತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಕುರಿತು ಖಡಕ್ ಆಗಿ ಹೇಳಿದ್ದಾರೆ. ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಣೆ ಮಾಡುವ ಕುರಿತು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕಾನೂನು ತೊಡಕುಗಳ ಕುರಿತು ಹಾಗೂ 371 ಜೆ ಅಡಿ ಮೀಸಲಾತಿಗೆ ಸಂಬಂಧಿಸಿದ ಸವಾಲುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಪ್ರತಿವರ್ಷ ಎಲ್ಲ ಇಲಾಖೆಗಳ ನೇಮಕಾತಿಗೆ ಏಕಕಾಲಕ್ಕೆ ಅಧಿಸೂಚನೆ ಹೊರಡಿಸಲು ಅನುವಾಗುವಂತೆ ಎಲ್ಲ ಇಲಾಖೆಗಳು ನಿಗದಿತ ಗಡುವಿನೊಳಗೆ ನೇಮಕಾತಿ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚಿಸಿದ್ದಾರೆ.
ಪರೀಕ್ಷಾ ವೇಳಾಪಟ್ಟಿಯಲ್ಲಿ ಫಲಿತಾಂಶ ಪ್ರಕಟಣೆಯ ದಿನಾಂಕ ನಿಗದಿ, ಸಿಬ್ಬಂದಿ ಕೊರತೆ, ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷೆಗಳೊಂದಿಗೆ ಕ್ಲ್ಯಾಷ್ ಆಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಪ್ರತಿ ನೇಮಕಾತಿ ಪ್ರಕ್ರಿಯೆಯೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಲ್ಯಾಣ ಕರ್ನಾಟಕ ಕೋಶದ ಸಹಮತಿಯೊಂದಿಗೆ ಅಧಿಸೂಚನೆ ಹೊರಡಿಸಬೇಕು. ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುವುದರಿಂದ ನೇಮಕಾತಿ ಆದೇಶ ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಹೀಗಾಗಿ ನೇಮಕಾತಿ ಬಗ್ಗೆ ಇಲಾಖಾ ಮುಖ್ಯಸ್ಥರು, ಪ್ರತಿ ವಾರ ಪರಿಶೀಲನೆ ಮಾಡಬೇಕು. ಸುತ್ತೋಲೆಗಳ ಕೈಪಿಡಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.


















