ನವದೆಹಲಿ: ಕರ್ನಾಟಕದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಶಾಲೆಗಳಿಗೆ ಶಿಕ್ಷಕರ ನೇಮಕ ಆಗದೆ ಪದವೀಧರರ ಜತೆಗೆ ಮಕ್ಕಳ ಭವಿಷ್ಯಕ್ಕೂ ಕುತ್ತು ಬಂದಿದೆ. ಕರ್ನಾಟಕ ಮಾತ್ರವಲ್ಲ ಹಲವು ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಇದೆ. ಅಷ್ಟೇ ಅಲ್ಲ, ದೇಶದ ಭವಿಷ್ಯ ನಿರ್ಧರಿಸುವ ಐಐಟಿ, ಐಐಎಂಗಳಲ್ಲಿಯೇ ಶೇ.56ರಷ್ಟು ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ ಎಂದು ಸಂಸದೀಯ ಸಮಿತಿ ವರದಿಯೇ ತಿಳಿಸಿದೆ.
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂ), ಎನ್ಐಟಿ, ಕೇಂದ್ರೀಯ ವಿವಿಗಳಲ್ಲಿ ಶೇ.56.18ರಷ್ಟು ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ ಎಂದು ವರದಿ ತಿಳಿಸಿದೆ. ಖಾಲಿ ಹುದ್ದೆಗಳ ಕುರಿತು ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಹಾಗೂ ಕ್ರೀಡೆ ಕುರಿತ ಸಂಸದೀಯ ಸಮಿತಿಯು ವಿಸ್ತೃತ ವರದಿ ತಯಾರಿಸಿದ್ದು, ಕೇಂದ್ರ ಸರ್ಕಾರವು ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.
2025ರ ಜನವರಿ 31ರ ವೇಳೆಗೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 18,940 ಪ್ರೊಫೆಸರ್ ಗಳು ಇರಬೇಕು. ಆದರೆ, ಶೇ.28.56ರಷ್ಟು ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ. ಇನ್ನು 11,298 ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಲ್ಲಿ (ಎಂಟ್ರಿ ಲೆವೆಲ್) ಶೇ.17.97ರಷ್ಟು ಹುದ್ದೆಗಳು ಖಾಲಿ ಇವೆ. 5,102 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಲ್ಲಿ ಶೇ.38.28ರಷ್ಟು (ಮಿಡ್ ಲೆವೆಲ್) ಹುದ್ದೆಗಳಿಗೆ ನೇಮಕ ಮಾಡಿಕೊಂಡಿಲ್ಲ ಎಂದು ವರದಿಗಳು ತಿಳಿಸಿದೆ.
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಐಐಎಸ್ಇಆರ್) ಸೇರಿ ಹಲವು ಮಹತ್ವದ ಸಂಸ್ಥೆಗಳಲ್ಲಿ ಎಂಜಿನಿಯರ್ ಗಳು, ಆರ್ಥಿಕ ತಜ್ಞರು, ಬಿಸಿನೆಸ್ ಮ್ಯಾನೇಜ್ ಮೆಂಟ್ ಉದ್ಯೋಗಿಗಳು ಸೃಷ್ಟಿಯಾಗುತ್ತಾರೆ. ಆದರೆ, ಇಂತಹ ಸಂಸ್ಥೆಗಳಲ್ಲೇ ಅರ್ಧಕ್ಕಿಂತ ಹೆಚ್ಚು ಬೋಧಕರ ಹುದ್ದೆಗಳು ಖಾಲಿ ಇರುವುದು ಬೇಸರದ ಸಂಗತಿಯಾಗಿದೆ.