ಇಂದೋರ್: ಭಾರತದಲ್ಲಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ನಡೆಯುತ್ತಿರುವಾಗಲೇ, ಇಂದೋರ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಪಂದ್ಯಾವಳಿಯ ಉತ್ಸಾಹಕ್ಕೆ ಕಪ್ಪುಚುಕ್ಕೆ ಇಟ್ಟಿದೆ. ಅಷ್ಟೇ ಅಲ್ಲ, ಈ ಘಟನೆಗೆ ಮಧ್ಯಪ್ರದೇಶದ ಸಚಿವರು ನೀಡಿರುವ ಹೇಳಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಹರಾಜಿಗಿಟ್ಟಂತಾಗಿದೆ.
ಇತ್ತೀಚೆಗೆ ಇಂದೋರ್‌ನಲ್ಲಿ ಇಬ್ಬರು ಆಸ್ಟ್ರೇಲಿಯಾದ ಖ್ಯಾತ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆಯು ರಾಜ್ಯದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಇದರ ಬೆನ್ನಲ್ಲೇ ಮಧ್ಯಪ್ರದೇಶದ ಸಂಪುಟ ಸಚಿವ ಕೈಲಾಶ್ ವಿಜಯವರ್ಗೀಯ ಅವರು ನೀಡಿರುವ ಹೇಳಿಕೆಯು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ.
ಆಟಗಾರ್ತಿಯರಿಗೆ ಕಿರುಕುಳ ನೀಡಿರುವ ಖಜ್ರಾನಾ ಪ್ರದೇಶದ ಅಖೀಲ್ ಅಲಿಯಾಸ್ ನೈತ್ರಾ (29) ಎಂಬ ಆರೋಪಿಯನ್ನು ದೂರು ಬಂದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ವಿಶ್ವದ ಅಗ್ರಮಾನ್ಯ ಮಹಿಳಾ ಕ್ರಿಕೆಟಿಗರು ಭಾರತದಲ್ಲಿರುವಾಗ ಇಂತಹ ಘಟನೆ ನಡೆದಿರುವುದು ಕ್ರೀಡಾ ವಲಯದಲ್ಲಿ ಆಘಾತವನ್ನೂ ಉಂಟು ಮಾಡಿದೆ.
ಸಚಿವ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ
ತಮ್ಮ ಸರ್ಕಾರದ ಅವಧಿಯಲ್ಲಾಗಿರುವ ಈ ಭದ್ರತಾ ಲೋಪದ ಬಗ್ಗೆ ಗಮನಹರಿಸುವ ಬದಲು, ಸಚಿವ ಕೈಲಾಶ್ ವಿಜಯವರ್ಗೀಯ ಅವರ ಹೇಳಿಕೆಯು ಹೊಸ ವಿವಾದವನ್ನು ಸೃಷ್ಟಿಸಿದೆ. ಈ ಘಟನೆಯಿಂದ ಆಟಗಾರ್ತಿಯರು ಪಾಠ ಕಲಿಯಬೇಕು ಎಂದು ಅವರು ಹೇಳಿದ್ದಾರೆ. “ಯಾವುದೇ ಆಟಗಾರರು ಎಲ್ಲಿಗಾದರೂ ಹೋದಾಗ, ನಾವು ಹೊರಗೆ ಹೋದರೂ ಸಹ, ಕನಿಷ್ಠ ಒಬ್ಬ ಸ್ಥಳೀಯ ವ್ಯಕ್ತಿಗೆ ಮಾಹಿತಿ ನೀಡುತ್ತೇವೆ. ಭವಿಷ್ಯದಲ್ಲಿ ಆಟಗಾರ್ತಿಯರು ತಮ್ಮ ಸ್ಥಳದಿಂದ ಹೊರಡುವಾಗ ಭದ್ರತಾ ಸಿಬ್ಬಂದಿ ಅಥವಾ ಸ್ಥಳೀಯ ಆಡಳಿತಕ್ಕೆ ತಿಳಿಸಬೇಕು ಎಂಬುದನ್ನು ಈ ಘಟನೆ ನೆನಪಿಸುತ್ತದೆ. ಯಾಕೆಂದರೆ, ಕ್ರಿಕೆಟ್ ಆಟಗಾರರಿಗೆ ಇಲ್ಲಿ ಕೆಲವೊಂದು ಕ್ರೇಜ್ ಇದೆ, ಇನ್ನಾದರೂ ಅವರು ಪಾಠ ಕಲಿಯಲಿ” ಎಂದು ಹೇಳಿದ್ದಾರೆ.
“ಕೆಲವೊಮ್ಮೆ ಆಟಗಾರರಿಗೆ ತಮ್ಮ ಜನಪ್ರಿಯತೆಯ ಅರಿವಿರುವುದಿಲ್ಲ. ಅವರು ಬಹಳ ಜನಪ್ರಿಯರಾಗಿರುವುದರಿಂದ ಜಾಗರೂಕರಾಗಿರಬೇಕು. ಈ ಘಟನೆ ಎಲ್ಲರಿಗೂ ಒಂದು ಪಾಠ. ನಮಗೂ ಪಾಠ, ಆಟಗಾರರಿಗೂ ಪಾಠ,” ಎಂದು ವಿಜಯವರ್ಗೀಯ ಹೇಳಿದ್ದಾರೆ.
ಹೇಳಿಕೆಗೆ ವ್ಯಾಪಕ ಆಕ್ರೋಶ
ಸಚಿವರ ಈ ಹೇಳಿಕೆಗೆ ವಿರೋಧ ಪಕ್ಷಗಳು ಮತ್ತು ಮಹಿಳಾ ಹಕ್ಕುಗಳ ಸಂಘಟನೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಅರುಣ್ ಯಾದವ್, “ಇದು ಅಸಹ್ಯಕರ ಮತ್ತು ಪ್ರತಿಗಾಮಿ ಹೇಳಿಕೆ. ರಾಜ್ಯವು ತನ್ನ ಅತಿಥಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುವ ಬದಲು, ಸಚಿವರು ಬಲಿಪಶುಗಳನ್ನೇ ದೂಷಿಸುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಹಿಂದೆಯೂ ವಿವಾದ ಸೃಷ್ಟಿಸಿದ್ದ ವಿಜಯವರ್ಗೀಯ
ವಿಜಯವರ್ಗೀಯ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವುದು ಇದೇ ಮೊದಲೇನಲ್ಲ. “ಇಂದಿನ ಹುಡುಗಿಯರು ಅಸಭ್ಯವಾದ ಬಟ್ಟೆಗಳನ್ನು ಧರಿಸುತ್ತಾರೆ. ನಾವು ಮಹಿಳೆಯರನ್ನು ದೇವತೆಗಳೆಂದು ಕರೆಯುತ್ತೇವೆ, ಆದರೆ ಅವರು ಹಾಗೆ ಕಾಣುವುದಿಲ್ಲ. ಅವರು ಶೂರ್ಪನಖಿಯಂತೆ ಕಾಣುತ್ತಾರೆ,” ಎಂದು 2022ರ ಹನುಮಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
“ಕೆಲವೊಮ್ಮೆ ಹುಡುಗಿಯರು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಮುಂದಿನ ಬಾರಿ ಸಭ್ಯವಾದ ಬಟ್ಟೆ ಧರಿಸಿ ಬಾ, ಆಗ ಫೋಟೋ ತೆಗೆದುಕೊಳ್ಳೋಣ ಎಂದು ಹೇಳುತ್ತೇನೆ,” ಎಂದು ಇಂದೋರ್‌ನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಔಷಧದ ಬೆಲೆ ವಿಚಾರಕ್ಕೆ ಜಗಳ: ಕಾನೂನು ವಿದ್ಯಾರ್ಥಿಯ ಹೊಟ್ಟೆ ಬಗೆದು, ಬೆರಳುಗಳನ್ನು ಕತ್ತರಿಸಿದ ದುಷ್ಕರ್ಮಿಗಳು!



















