ತುಮಕೂರು: ಸಿದ್ದಗಂಗಾ ಮಠದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ.
ಇಲ್ಲಿನ (Tumakuru) ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಹಳೆಮಠದ (Siddaganga Mutt) ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮಠಕ್ಕೆ ಹೋಗುವವರು ಆತಂಕ ವ್ಯಕ್ತಪಡಿಸುವಂತಾಗಿದೆ.
ಶನಿವಾರ ಮಧ್ಯರಾತ್ರಿ 11:30ರ ಸಂದರ್ಭದಲ್ಲಿ ಚಿರತೆಯು ಆವರಣದಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಠದ ಸ್ಮೃತಿ ವನದ ಹತ್ತಿರ ಚಿರತೆ ಕಾಣಿಸಿಕೊಂಡಿದ್ದು, ಅಲ್ಲಿದ್ದ ನಾಯಿಯೊಂದು ಬೊಗಳಿದಾಗ ಓಡಿ ಹೋಗಿದೆ.
ಹೀಗಾಗಿ ಮಠದ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೆರೆಗೆ ಬೋನು ಅಳವಡಿಸಲಾಗಿದೆ. ನಾಯಿ ಬೇಟೆಯಾಡಲು ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಭಾಗದಲ್ಲಿ ಆಗಾಗ ಚಿರತೆ, ಕರಡಿಗಳು ಗ್ರಾಮಗಳಿಗೆ ಬರುತ್ತಿರುತ್ತವೆ. ಆದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಿಲ್ಲ. ಕೂಡಲೇ ಚಿರತೆ ಸೇರಿದಂತೆ ಅಪಾಯಕಾರಿ ಪ್ರಾಣಿಗಳಿಂದ ಮುಕ್ತಿ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.