ಬೆಂಗಳೂರು : ಮಾನವ-ವನ್ಯ ಪ್ರಾಣಿ ಸಂಘರ್ಷ ನಿವಾರಣೆಯ ಹಿನ್ನೆಲೆಯಲ್ಲಿ ಹಲವು ಉಪಕ್ರಮಗಳನ್ನು ಇಂದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 2026ರ ಬಜೆಟ್‌ನಲ್ಲಿ ಕೈಗೊಳ್ಳಲಾಗಿದೆ.
ಮಾನವ–ವನ್ಯಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ʻಕರ್ನಾಟಕ ಮಾನವ–ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆʼಯನ್ನು ಅನುಷ್ಠಾನಗೊಳಿಸಲು ಮುಂದಿನ ಐದು ವರ್ಷದಲ್ಲಿ 1,500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 269 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ..
ಅತೀ ಮುಖ್ಯವಾದ ಕಾರ್ಯವಾಗಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ, ಈ ಕೆಳಕಂಡ ಉಪಕ್ರಮಗಳಿಗಾಗಿ ಒಟ್ಟಾರೆ 1,044 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ: ಬೆಳೆ ಹಾನಿ, ಜಾನುವಾರು ನಷ್ಟ, ಮಾನವ ಪ್ರಾಣ ಹಾನಿ ಇತ್ಯಾದಿ ಪರಿಹಾರ; ಹೊಸದಾಗಿ ಮೂರು ಆನೆ ಕಾರ್ಯಪಡೆಗಳು ಮತ್ತು ಒಂದು ಹೊಸ ಚಿರತೆ ಕಾರ್ಯಪಡೆಯ ರಚನೆ; ಕಾರ್ಯಪಡೆಗಳಿಗಾಗಿ ಹೊಸದಾಗಿ 358 ಹುದ್ದೆಗಳ ಸೃಜನೆ; ರೈಲ್ವೆ ಬ್ಯಾರಿಕೇಡ್, ಟ್ರೆಂಚಿಂಗ್, ಸೋಲಾರ್ ಫೆನ್ಸಿಂಗ್ ಇತರೆ ರಕ್ಷಣಾ ಕಾರ್ಯ.
ಉದ್ಯಾನ ನಗರಿ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನ ಒಟ್ಟು 5,676 ಎಕರೆ ವಿಸ್ತೀರ್ಣದ ಪ್ರದೇಶವನ್ನು ʻಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲುʼ ಎಂದು ಘೋಷಿಸಿದ್ದು, ಈ ಪ್ರದೇಶದ ಆವಾಸಸ್ಥಾನ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು. ಬೆಂಗಳೂರು ಹೊರವಲಯದ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಸೆರೆಹಿಡಿಯಲ್ಪಟ್ಟ ಸಂದರ್ಭಗಳಲ್ಲಿ ಅವುಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ ಐದು ಕೋಟಿ ರೂ.ಗಳ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : UPSC ಪರೀಕ್ಷೆ ಫಲಿತಾಂಶ ಪ್ರಕಟ | ಅನುಜ್ ಅಗ್ನಿಹೋತ್ರಿ ದೇಶಕ್ಕೆ ಟಾಪರ್.. ಕಿರಣ್ ಕಮಟೆ ಕರ್ನಾಟಕಕ್ಕೆ ಫಸ್ಟ್!



















