ಬೆಂಗಳೂರು | ನೆಲಮಂಗಲದಲ್ಲಿ ಚಿರತೆ ಹಾವಳಿ ತೀವ್ರಗೊಂಡಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆಗಳ ದಾಳಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ಹೇಮಗಂಗಾ ಬಡಾವಣೆ ಜನರಲ್ಲಿ ಭೀತಿ ಮನೆ ಮಾಡಿದೆ. ತಮ್ಮ ಸಾಕುಪ್ರಾಣಿಗಳ ಸುರಕ್ಷತೆಗಾಗಿ ಜನ ರಾತ್ರಿಯಿಡೀ ದೊಣ್ಣೆ ಹಿಡಿದು ಕಾವಲು ಕಾಯುವಂತಹ ಪರಿಸ್ಥಿತಿ ಎದುರಾಗಿದೆ.
ಮುಂಜಾನೆ 4 ಗಂಟೆ 17 ನಿಮಿಷಕ್ಕೆ ಚಿರತೆಯೊಂದು ಬಡಾವಣೆಯ ನಾಯಿಯೊಂದರ ಮೇಲೆ ದಾಳಿ ನಡೆಸಿದ್ದು, ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಚಿರತೆ ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದರೂ, ನಾಯಿಯು ಚಿರತೆಯ ದಾಳಿಯಿಂದ ಬದುಕುಳಿದಿದೆ.
ಈ ಘಟನೆಗಳ ನಂತರ, ಹೇಮಗಂಗಾ ಬಡಾವಣೆಯ ನಿವಾಸಿಗಳು ಮುಂಜಾನೆಯ ವಾಕಿಂಗ್‌ಗೆ ತೆರಳಲು ಭಯಪಡುತ್ತಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಹ ಹಿಂಜರಿಯುತ್ತಿದ್ದಾರೆ. ಇಲ್ಲಿ ಸಣ್ಣ ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ ಪೋಷಕರು ಚಿಂತಿತರಾಗಿದ್ದಾರೆ.
ಅಲ್ಲದೆ, ಮುಂಜಾನೆ 2 ಮತ್ತು 3 ಗಂಟೆಗೆ ಕೆಲಸಕ್ಕೆ ತೆರಳುವ ಮತ್ತು ಬರುವ ಕಾರ್ಮಿಕರು ಒಬ್ಬೊಬ್ಬರೇ ಓಡಾಡಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಚಿರತೆಗಳನ್ನು ಹಿಡಿದು ಸ್ಥಳೀಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಡಾವಣೆಯ ಜನರು ಸಾಮೂಹಿಕವಾಗಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು | ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ರೀತಿ ಪಾರು!



















