ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಮತ್ತೆ ಬ್ಯಾಕ್ಪೇನ್ ಬೆನ್ನು ಬಿದ್ದಿದೆ. ಜೈಲಾಧಿಕಾರಿಗಳಿಗೆ ದೂರು ನೀಡಿದ್ದ ಬೆನ್ನಲ್ಲೇ ಈಗ ಜೈಲಿನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ತಜ್ಞರು ಫಿಸಿಯೋಥೆರಪಿ ಮಾಡಿದ್ದಾರೆ. ಇದ್ರ ನಡುವೆ ಕೋರ್ಟ್ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಕೆಲ ಪರಿಶೀಲನೆ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ ಮೇಲೆ ಜೈಲು ಸೇರಿದ ದಾಸನಿಗೆ ಕಳೆದೊಂದು ವಾರದಿಂದ ಬೆನ್ನುನೋವು ಕಾಣಿಸಿಕೊಂಡಿದೆ. ಈ ಬಗ್ಗೆ ದರ್ಶನ್ ದೂರಿನ ಬೆನ್ನಲ್ಲೇ ಜೈಲಾಧಿಕಾರಿಗಳು ಜೈಲಿನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, C.V.ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರಿಂದ ಫಿಸಿಯೋಥೆರಪಿ ಟ್ರೀಟ್ಮೆಂಟ್ ಮಾಡಿದ್ದಾರೆ. ಜೈಲಿನಲ್ಲಿ ನೆಲದ ಮೇಲೆ ಮಲಗ್ತಿರೋದ್ರಿಂದ ಮತ್ತೆ ಮೊಣಕೈ ನೋವು ಶುರುವಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಹೇಗಿದೆ ದರ್ಶನ್‌ಗೆ ಸವಲತ್ತು? ಕೋರ್ಟ್ ಆದೇಶದ ಮೇರೆಗೆ ನಿನ್ನೆ ಮಧ್ಯಾಹ್ನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವರದರಾಜು ತಂಡ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದರ್ಶನ್‌ಗೆ ನಿಯಮಾವಳಿ ಅನುಸಾರ ಸೌಲಭ್ಯ ನೀಡಲಾಗಿದೆಯೆ? ಕೋರ್ಟ್ ಆದೇಶ ಹಾಗೂ ಜೈಲಿನ ಮ್ಯಾನ್ಯುಯಲ್ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ದರ್ಶನ್ ಬ್ಯಾರಕ್ನಲ್ಲಿ ಪರಿಶೀಲನೆ ನಡೆಸಿದ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು, ನೀಡಿರುವ ಸವಲತ್ತುಗಳ ಕುರಿತು ಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ. ದರ್ಶನ್‌ಗೆ ಸವಲತ್ತುಗಳನ್ನ ನೀಡುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಪ್ರತ್ಯೇಕ ಅರ್ಜಿ ಸಲ್ಲಿಸಿ ಖುದ್ದು ನ್ಯಾಯಾಧೀಶರೇ ಪರಿಶೀಲನೆ ಮಾಡಿ ಎಂದು ಮನವಿ ಮಾಡಿದ್ದರು. ದರ್ಶನ್ ಪರ ವಕೀಲರ ಅರ್ಜಿಗೆ ಅಧಿಕಾರಿಗಳ ಮೂಲಕ ಪರಿಶೀಲನೆಗೆ ನಿರ್ದೇಶನ ನೀಡಲಾಗಿದೆ. ಉಲ್ಲಂಘನೆ ಮಾಡಿ ಸವಲತ್ತುಗಳನ್ನ ನಿರಾಕರಿಸಲಾಗಿದೆಯೇ ಅಂತ ಪರಿಶೀಲಿಸಿದ್ದು, ಇದೇ ಅಕ್ಟೋಬರ್ 18ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ.