ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮಖ್ಯ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿದಂತೆ ಐವರ ವಿರುದ್ಧ ಮತ್ತು ಪೋಲೀಸ್ ಆಯುಕ್ತರು ಸೇರಿದಂತೆ ಐವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಕುರಿತು ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ರಸ್ತೆಗಳ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ 46,300 ಕೋಟಿ ರೂ. ಹಗರಣ ನಡೆದಿದ್ದು, ಇದರಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಸೇರಿದಂತೆ 60ಕ್ಕೂ ಅಧಿಕ ಭ್ರಷ್ಟ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಹಗರಣದ ಬಗ್ಗೆ ದಾಖಲೆಗಳ ಸಮೇತ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಮತ್ತು ತಮ್ಮ ವಿರುದ್ಧದ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳು ಬಿಡುಗಡೆಯಾಗದಂತೆ ತಡೆಯುವ ದುರುದ್ದೇಶದಿಂದ ಎಲ್ಲಾ 18 ಐಎಎಸ್ ಅಧಿಕಾರಿಗಳು ಒಂದಾಗಿ ಕಮ್ಯುನಿಸ್ಟ್ ಆಡಳಿತದ ಮಾದರಿಯಲ್ಲಿ ನಾನು ನಡೆಸಿದ ಸುದ್ದಿಗೋಷ್ಠಿ ತಡೆಯಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ.
ಈ ಮೂಲಕ ಭಾರತ ಸಂವಿಧಾನದ 19ನೇ ವಿಧಿ ಮತ್ತು 21ನೇ ವಿಧಿ (Articale 19 ಮತ್ತು Article 21) ಯನ್ನು ಉಲ್ಲಂಘಿಸಿ ವಾಕ್ ಸ್ವಾತಂತ್ರ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಲವಂತವಾಗಿ ಮೊಟಕು ಗೊಳಿಸಿದ್ದಾರೆ. 2003-04 ಮತ್ತು 2013-14 ರಲ್ಲಿ ಎರಡು ಬಾರಿ ಬಿಬಿಎಂಪಿಯ ಕೌನ್ಸಿಲ್ ಕಟ್ಟಡದಲ್ಲಿ ಪಾಲಿಕೆಯ ಮಾಜಿ ಮಹಾಪೌರರು, ಉಪ ಮಹಾಪೌರರು, ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರುಗಳಿಗೆ ಪ್ರತ್ಯೇಕವಾದ ಕೊಠಡಿಯನ್ನು ಮೀಸಲಿರಿಸಬೇಕೆಂಬ ಹಾಗೂ ಆ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಅಧಿಕಾರಿಗಳ ಜೊತೆ ಮಾತನಾಡಲು ಮುಕ್ತವಾದ ಅವಕಾಶ ನೀಡಿರುವ ವಿಷಯವು ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಅಲ್ಲದೇ, ರಾಜ್ಯ ಸರ್ಕಾರದಿಂದಲೂ ಸಹ ಅನುಮೋದನೆಯಾಗಿದೆ. ಇದಕ್ಕಾಗಿ ಕೊಠಡಿಯನ್ನೂ ಮೀಸಲಿರಿಸಲಾಗಿದೆ.
ಆದರೆ, ಈ ನಿರ್ಣಯವನ್ನು ಉಲ್ಲಂಘಿಸಿ ನನ್ನ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಲಾಗಿದೆ. ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ಮಹಾನಗರದ ಪೊಲೀಸ್ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು ಆಡಳಿತ, ಸಿಲ್ವರ್ ಜುಬ್ಲಿ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಸಂಬಂಧ ಎಲ್ಲರಿಗೂ ನಮ್ಮ ವಕೀಲರ ಮೂಲಕ ನೋಟಿಸ್ ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.