ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ “ಅಣ್ವಸ್ತ್ರ ದಾಳಿ” ಬೆದರಿಕೆಯ ಬೆನ್ನಲ್ಲೇ, ಪಾಕಿಸ್ತಾನದ ರಾಜಕಾರಣಿ ಬಿಲಾವಲ್ ಭುಟ್ಟೋ ಕೂಡ ಭಾರತಕ್ಕೆ ಯುದ್ಧದ ಬೆದರಿಕೆ ಒಡ್ಡಿದ್ದಾರೆ. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಅಮಾನತು ಮತ್ತು ‘ಆಪರೇಷನ್ ಸಿಂದೂರ’ದಂತಹ ಕ್ರಮಗಳನ್ನು ಮುಂದುವರಿಸಿದರೆ, ಯುದ್ಧವನ್ನು ಪರಿಗಣಿಸದೆ ನಮಗೆ ಬೇರೆ ದಾರಿಯಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ದಶಕಗಳ ಹಳೆಯ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದೆ. ಮಂಗಳವಾರ ಪಾಕ್‌ನ ಸಿಂಧ್ ಸರ್ಕಾರದ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭುಟ್ಟೋ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಪಾಕಿಸ್ತಾನಕ್ಕೆ “ದೊಡ್ಡ ಹಾನಿ” ಮಾಡಿದೆ ಎಂದು ಆರೋಪಿಸಿದರು.
ಎಲ್ಲಾ ಪಾಕಿಸ್ತಾನಿಯರು ಪ್ರಧಾನಿ ಮೋದಿ ಮತ್ತು ಭಾರತದ ಆಕ್ರಮಣಕಾರಿ ನಡೆಯ ವಿರುದ್ಧ ಒಂದಾಗಬೇಕು ಎಂದೂ ಕರೆ ನೀಡಿದರು. “ನೀವು (ಭಾರತ) ಸಿಂದೂರದಂತಹ ದಾಳಿ ನಡೆಸಲು ಯೋಚಿಸಿದರೆ, ಪಾಕಿಸ್ತಾನದ ಪ್ರತಿಯೊಂದು ಪ್ರಾಂತ್ಯದ ಜನರು ನಿಮ್ಮೊಂದಿಗೆ ಹೋರಾಡಲು ಸಿದ್ಧರಾಗಿದ್ದಾರೆಂದು ತಿಳಿಯಿರಿ. ಮತ್ತು ಈ ಯುದ್ಧದಲ್ಲಿ ನೀವು ಸೋಲುವುದು ಖಚಿತ. ನಾವು ಯಾರಿಗೂ ತಲೆಬಾಗುವುದಿಲ್ಲ,” ಎಂದೂ ಭುಟ್ಟೋ ಎಚ್ಚರಿಸಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಅಣ್ವಸ್ತ್ರ ಯುದ್ಧದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಿಲಾವಲ್ ಭುಟ್ಟೋ ಅವರ ಈ ಹೇಳಿಕೆ ಹೊರಬಿದ್ದಿದೆ. ಅಮೆರಿಕ ಪ್ರವಾಸದಲ್ಲಿದ್ದ ಮುನೀರ್, ಭಾರತದೊಂದಿಗೆ ಯುದ್ಧವಾದರೆ ಮತ್ತು ಪಾಕಿಸ್ತಾನದ ಅಸ್ತಿತ್ವಕ್ಕೆ ಅಪಾಯ ಎದುರಾದರೆ, “ನಾವು ನಮ್ಮೊಂದಿಗೆ ಅರ್ಧದಷ್ಟು ಜಗತ್ತನ್ನು ನಾಶ ಮಾಡುತ್ತೇವೆ” ಎಂದು ಹೇಳಿದ್ದರು. ಸಿಂಧೂ ನದಿ ಕಾಲುವೆಗಳ ಮೇಲೆ ಭಾರತವು ಯಾವುದೇ ಅಣೆಕಟ್ಟು ನಿರ್ಮಿಸಿದರೆ, ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುವುದಾಗಿಯೂ ಅವರು ಬೆದರಿಕೆ ಹಾಕಿದ್ದರು.
ಮುನೀರ್ ಅವರ ಅಣ್ವಸ್ತ್ರ ಬೆದರಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, “ಅಣ್ವಸ್ತ್ರಗಳ ಬಗ್ಗೆ ಮಾತನಾಡುವುದು ಪಾಕಿಸ್ತಾನಕ್ಕೆ ಚಾಳಿಯಾಗಿಬಿಟ್ಟಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಸೌಹಾರ್ದಯುತ ಮೂರನೇ ರಾಷ್ಟ್ರದ ನೆಲದಿಂದ (ಅಮೆರಿಕ) ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿರುವುದು ವಿಷಾದನೀಯ ಎಂದೂ ಅಭಿಪ್ರಾಯಪಟ್ಟಿದೆ. ಉಗ್ರಗಾಮಿ ಗುಂಪುಗಳೊಂದಿಗೆ ಸೇನಾ ಸಹಭಾಗಿತ್ವ ಹೊಂದಿರುವ ದೇಶದಲ್ಲಿ ಅಣ್ವಸ್ತ್ರಗಳ ನಿಯಂತ್ರಣದ ಬಗ್ಗೆ ಇದು ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಇದನ್ನು ಅಂತರರಾಷ್ಟ್ರೀಯ ಸಮುದಾಯ ಗಮನಿಸಬೇಕು ಎಂದು ಸಚಿವಾಲಯ ಹೇಳಿದೆ.



















