ನವದೆಹಲಿ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರನ್ನು ಸುಪ್ರೀಂ ಕೋರ್ಟ್ ವಕೀಲರ ಸಂಘ (SCBA) ತಕ್ಷಣದಿಂದಲೇ ಉಚ್ಚಾಟನೆ ಮಾಡಿ ಇಂದು ಆದೇಶ ಹೊರಡಿಸಿದೆ. ಅಲ್ಲದೆ, ಅವರ ಪ್ರವೇಶ ಪತ್ರವನ್ನು ರದ್ದುಪಡಿಸಿ, ಸುಪ್ರೀಂ ಕೋರ್ಟ್ ಆವರಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಸೋಮವಾರ ನ್ಯಾಯಾಲಯದ ಕಲಾಪದ ವೇಳೆ 71 ವರ್ಷದ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರು ಈ ಕೃತ್ಯ ಎಸಗಿದ್ದರು. ತಕ್ಷಣವೇ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯದಿಂದ ಹೊರಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ, “ಸನಾತನ ಧರ್ಮದ ಅವಮಾನವನ್ನು ಭಾರತ ಸಹಿಸುವುದಿಲ್ಲ” ಎಂದು ಕಿಶೋರ್ ಘೋಷಣೆ ಕೂಗಿದ್ದರು. ಆದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸಿಜೆಐ ಗವಾಯಿ ಅವರು ಸೂಚಿಸಿದ್ದ ಕಾರಣ, ಕಿಶೋರ್‌ರನ್ನು ಪೊಲೀಸರು ಬಂಧಿಸಿಲ್ಲ.
ಆದರೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಕೀಲರ ಸಂಘ, “ಇಂತಹ ಖಂಡನೀಯ, ಅವ್ಯವಸ್ಥಿತ ಮತ್ತು ಅಸಭ್ಯ ವರ್ತನೆಯು ನ್ಯಾಯಾಲಯದ ಅಧಿಕಾರಿಗೆ ಶೋಭೆ ತರುವುದಿಲ್ಲ. ಇದು ವೃತ್ತಿಪರ ನೈತಿಕತೆ, ನ್ಯಾಯಾಲಯದ ಘನತೆ ಮತ್ತು ಗೌರವದ ಗಂಭೀರ ಉಲ್ಲಂಘನೆಯಾಗಿದೆ” ಎಂದು ತನ್ನ ಅಮಾನತು ಆದೇಶದಲ್ಲಿ ತಿಳಿಸಿದೆ. ಈ ಕೃತ್ಯವು “ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನ್ಯಾಯಾಲಯದ ಕಲಾಪಗಳ ಪಾವಿತ್ರ್ಯತೆಯ ಮೇಲಿನ ನೇರ ಹಲ್ಲೆ” ಎಂದು ಸಂಘ ಬಣ್ಣಿಸಿದೆ. ಇದಕ್ಕೂ ಮುನ್ನ, ಭಾರತೀಯ ವಕೀಲರ ಪರಿಷತ್ತು (Bar Council of India) ಕೂಡ ಕಿಶೋರ್ ಅವರ ವಕಾಲತ್ತು ಪರವಾನಗಿಯನ್ನು ಅಮಾನತುಗೊಳಿಸಿ, ಈ ಘಟನೆಯನ್ನು “ಕಾನೂನು ಸಮುದಾಯಕ್ಕೊಂದು ಕಪ್ಪು ಚುಕ್ಕೆ” ಎಂದು ಕರೆದಿತ್ತು.
ಇತ್ತೀಚೆಗೆ ಮಧ್ಯಪ್ರದೇಶದ ಹಾನಿಗೊಳಗಾದ ವಿಷ್ಣು ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ಅರ್ಜಿಯನ್ನು ವಜಾ ಮಾಡಿದ್ದ ಸಿಜೆಐ, “ಹೋಗಿ ದೇವರನ್ನೇ ಕೇಳಿ” ಎಂದು ಹೇಳಿದ್ದರು ಎನ್ನಲಾಗಿದೆ. ಈ ಹೇಳಿಕೆಯಿಂದ ತಾನು ಆಕ್ರೋಶಿತನಾಗಿ ಈ ಕೃತ್ಯ ಎಸಗಿದ್ದಾಗಿ ಕಿಶೋರ್ ತಿಳಿಸಿದ್ದಾರೆ. ನಮ್ಮ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯಕ್ಕೆ ಬಂದಾಗ ಸುಪ್ರೀಂ ಕೋರ್ಟ್ ಇಂತಹ ಆದೇಶಗಳನ್ನು ನೀಡುತ್ತದೆ. ಬೇರೆ ಧರ್ಮಕ್ಕೆ ಬಂದಾಗ ಹೀಗೆ ಮಾಡುವುದಿಲ್ಲ. ಇದು ತಾರತಮ್ಯ ಎಂದು ಕಿಶೋರ್ ಆರೋಪಿಸಿದ್ದಾರೆ. ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದಿರುವ ಅವರು, “ಆ ದೇವರ ಆದೇಶದಂತೆ ನಾನು ನಡೆದಿದ್ದೇನೆ” ಎಂದಿದ್ದಾರೆ.
ದಾಳಿಯ ನಂತರವೂ ಸಿಜೆಐ ಗವಾಯಿ ಅವರು ವಿಚಲಿತರಾಗದೆ, “ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ, ವಿಚಾರಣೆಯನ್ನು ಮುಂದುವರಿಸಿ” ಎಂದು ಹೇಳುವ ಮೂಲಕ ಸಂಯಮ ಮೆರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಯ ನಂತರ ಖುದ್ದು ಸಿಜೆಐ ಗವಾಯಿ ಅವರೊಂದಿಗೆ ಮಾತನಾಡಿ, ಈ ದಾಳಿಯನ್ನು “ಖಂಡನೀಯ” ಎಂದು ಬಣ್ಣಿಸಿದ್ದು, ಇದು “ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ” ಎಂದು ಹೇಳಿದ್ದಾರೆ.