ಬೆಂಗಳೂರು | ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ BDA ಅಧಿಕಾರಿ ವೆಂಕಟೇಶ್ ಎಂಬಾತ ವಂಚನೆ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದ ವಕೀಲ ಹರಿಪ್ರಸಾದ್ ಅವರ ಕಚೇರಿಗೆ ನುಗ್ಗಿ ಡ್ರ್ಯಾಗನ್‌ನಿಂದ ಚುಚ್ಚಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ ವಕೀಲ ಹರಿಪ್ರಸಾದ್, ಗೋವಿಂದರಾಜನಗರ ಠಾಣೆಯಲ್ಲಿ ವೆಂಕಟೇಶ್ ವಿರುದ್ದ ದೂರು ದಾಖಲಿಸಿದ್ದಾರೆ.
ನೀತಾ ಎಂಬ ಮಹಿಳೆಗೆ ಆಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕಾಲತ್ತು ವಹಿಸಿದ್ದ ವಕೀಲ ಹರಿಪ್ರಸಾದ್‌ಗೆ ಅಧಿಕಾರಿ ವೆಂಕಟೇಶ್ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮಹಿಳೆಯ ಪರವಾಗಿ ವಕಾಲತ್ತು ವಹಿಸಬಾರದೆಂದು ವಕೀಲ ಹರಿಪ್ರಸಾದ್ ಅವರ ಕಚೇರಿಗೇ ನುಗ್ಗಿದ ಬಿಡಿಎ ಅಧಿಕಾರಿ ವೆಂಕಟೇಶ್, ಕೈಯಲ್ಲಿ ಡ್ರ್ಯಾಗನ್ ಹಿಡಿದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು, ಈ ವಿಷಯವನ್ನು ಮಾಧ್ಯಮಗಳಿಗೆ ಅಥವಾ ಪೊಲೀಸರಿಗೆ ತಿಳಿಸಿದರೆ ಇದೇ ಡ್ರ್ಯಾಗನ್‌ನಿಂದ ಚುಚ್ಚಿ ಕೊಲೆ ಮಾಡುತ್ತೇನೆ ಎಂದು ವಾರ್ನ್ ಮಾಡಿದ್ದಾನೆಂದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬನ ಈ ಗೂಂಡಾ ವರ್ತನೆಗೆ ವಕೀಲರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜಕಾರಣಿಗಳಿಗೆ 6 ಕೋಟಿ ಕೊಟ್ಟಿದ್ದೇನೆ, ರಿಕವರಿ ಮಾಡೋದು ಹೇಗೆ?
‘ನನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ, ನಾನು ಬಿಡಿಎ ಅಧಿಕಾರಿ’ ಎಂದು ಹೇಳಿಕೊಂಡು ವೆಂಕಟೇಶ್ ದರ್ಪ ಪ್ರದರ್ಶಿಸಿದ್ದಾನೆ. ಅಷ್ಟೇ ಅಲ್ಲದೆ, ನಾನು ಈಗಾಗಲೇ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ 6 ಕೋಟಿ ರೂಪಾಯಿ ಹಣ ನೀಡಿದ್ದೇನೆ, ಅದನ್ನು ರಿಕವರಿ ಮಾಡುವುದು ಹೇಗೆ ಎಂದು ನೀನೇ ಹೇಳು’ ರಾಜಕಾರಣಿಗಳಿಗೆ ಲಂಚ ನೀಡಿ ಅಧಿಕಾರ ನಡೆಸುತ್ತಿರುವ ಬಗ್ಗೆ ವಕೀಲರನ್ನೇ ಪ್ರಶ್ನಿಸಿದ್ದಾನೆ. ಆ ಮೂಲಕ ಹಣ ವಸೂಲಿಗೆ ತಡೆಯೊಡ್ಡಿದರೆ ಕೊಲೆ ಮಾಡುವುದಾಗಿ, ತನಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ ಇರುವುದಾಗಿ ಬಹಿರಂಗವಾಗಿಯೇ ವಕೀಲರಿಗೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.
ಇನ್ನು, ಆರೋಪಿ ಬಿಡಿಎ ಅಧಿಕಾರಿ ವೆಂಕಟೇಶ್ ವಿರುದ್ದ ಭ್ರಷ್ಟಾಚಾರ ಆರೋಪದ ಮೇಲೆ ಕಳೆದ ವರ್ಷ ಲೋಕಾಯುಕ್ತ ದಾಳಿ ನಡೆದಾಗ ಬರೋಬ್ಬರಿ 1.53 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದರ ಜೊತೆಗೆ, ಈತ ಈ ಹಿಂದೆ ‘ರೈಸ್ ಪುಲ್ಲಿಂಗ್’ ದಂಧೆಯಲ್ಲೂ ಭಾಗಿಯಾಗಿದ್ದ ಎಂಬ ಗಂಭೀರ ಆರೋಪಗಳಿವೆ. ಆದರೂ ಹುದ್ದೆಯಲ್ಲಿ ಮುಂದುವರಿದಿರುವುದು ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ : ಬದರಿನಾಥ-ಕೇದಾರನಾಥ ದರ್ಶನಕ್ಕೆ ಇನ್ಮುಂದೆ ’ನಾನು ಸನಾತನಿ’ ಅಫಿಡವಿಟ್ ಕಡ್ಡಾಯ!



















