ಲಕ್ನೋ: 2021ರ ನ್ಯಾಯಾಂಗ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್(Court News) ಸ್ಥಳೀಯ ವಕೀಲರೊಬ್ಬರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಂದ ಹಾಗೆ, ಈ ವಕೀಲ ಮಾಡಿದ ತಪ್ಪೇನು ಗೊತ್ತಾ? ವಕೀಲರ ಗೌನ್ ಧರಿಸದೇ, ಶರ್ಟ್ ಬಟನ್ ಹಾಕದೇ ಕೋರ್ಟ್ಗೆ ಬಂದಿದ್ದು!
ಕೋರ್ಟ್ಗೆ ಅನುಚಿತ ಉಡುಗೆಯಲ್ಲಿ ಹಾಜರಾದ ಕಾರಣಕ್ಕೆ ಅವರಿಗೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಘಟನೆ 2021ರಲ್ಲಿ ನಡೆದಿದ್ದು, ವಕೀಲ ಅಂಗಿಯ ಗುಂಡಿಗಳನ್ನು ತೆರೆದಿಟ್ಟುಕೊಂಡು, ವಕೀಲರ ಗೌನ್ ಧರಿಸದೇ ಕೋರ್ಟ್ಗೆ ಬಂದಿದ್ದರು. ಈ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದಾಗ, ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ನ್ಯಾಯಾಧೀಶರ ವಿರುದ್ಧವೇ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದರು. ಕೂಡಲೇ ಕೋರ್ಟ್ ಕೊಠಡಿಯಿಂದ ಹೊರಗೆ ಹೋಗಿ ಎಂದು ಜಡ್ಜ್ ಸೂಚಿಸಿದಾಗ, ಆ ವಕೀಲ, ನ್ಯಾಯಾಧೀಶರನ್ನು ಗೂಂಡಾಗಳು ಎಂದೂ ಕರೆದಿದ್ದರು. ಈ ಘಟನೆಯಿಂದ ಕೋರ್ಟ್ ಕಲಾಪಕ್ಕೆ ಭಂಗವಾಗಿತ್ತು. ಅಲ್ಲದೇ ಇದರಿಂದ ನ್ಯಾಯಾಲಯದ ಗೌರವಕ್ಕೆ ಧಕ್ಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಸ್ವಯಂಪ್ರೇರಿತವಾಗಿ ಈ ವಕೀಲನ ವಿರುದ್ಧ ಕಾನೂನು ಕ್ರಮ ಜರುಗಿಸಿತು.

ಕೋರ್ಟ್ನ ತೀರ್ಪು
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಬಿಆರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಆರೋಪಿಯ ವರ್ತನೆ, ಆತನ ಹಿಂದಿನ ದಾಖಲೆಗಳು ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಆರು ತಿಂಗಳ ಸರಳ ಜೈಲು ಶಿಕ್ಷೆಯ ಜೊತೆಗೆ 2,000 ರೂಪಾಯಿ ದಂಡವನ್ನು ವಿಧಿಸಿತು. ದಂಡವನ್ನು ಪಾವತಿಸಲು ವಿಫಲವಾದರೆ, ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಜೊತೆಗೆ, ಆ ವಕೀಲನಿಗೆ ಲಕ್ನೋದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಕೋರ್ಟ್ ತನ್ನ ತೀರ್ಪಿನಲ್ಲಿ, ವಕೀಲರ ವರ್ತನೆಯು ಕಾನೂನು ವೃತ್ತಿಯ ಘನತೆಗೆ ಧಕ್ಕೆ ತಂದಿದೆ ಎಂದು ಅಭಿಪ್ರಾಯಪಟ್ಟಿದೆ.
ಹೆಚ್ಚುವರಿ ಕ್ರಮ
ಕೋರ್ಟ್ ಈ ವಕೀಲನಿಗೆ ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಕ್ನೋ ಪೀಠದಲ್ಲಿ ವಕೀಲಿಕೆ ಮಾಡದಂತೆ ಯಾಕೆ ನಿಷೇಧಿಸಬಾರದು ಎಂದು ಬಗ್ಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿಗೊಳಿಸಿದೆ. ಈ ನೋಟಿಸ್ಗೆ ಮೇ 1, 2025 ರೊಳಗೆ ಉತ್ತರ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಈ ತೀರ್ಪು ಕಾನೂನು ವಲಯದಲ್ಲಿ ವಿವಿಧ ಚರ್ಚೆಗಳಿಗೆ ಕಾರಣವಾಗಿದೆ. ಕೆಲವರು ಕೋರ್ಟ್ನ ಕಠಿಣ ನಿಲುವನ್ನು ಸ್ವಾಗತಿಸಿದರೆ, ಇತರರು ಶಿಕ್ಷೆಯ ತೀವ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.