ಚಿಕ್ಕಬಳ್ಳಾಪುರ: ನಂದಿ ಬೆಟ್ಟದ ಪ್ರಸಿದ್ಧ ಟಿಪ್ಪು ಬೇಸಿಗೆ ಅರಮನೆಯ ಗೋಡೆ ಮೇಲೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬರೆಯಲಾಗಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆಯಾಗಿದ್ದ ಈ ಐತಿಹಾಸಿಕ ಸ್ಮಾರಕವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೇರಿದೆ.
ಪೊಲೀಸರ ಪ್ರಕಾರ, ಸೋಮವಾರ ಬೆಳಿಗ್ಗೆ ಬೆಂಗಳೂರಿನ ಹೊರವಲಯದಲ್ಲಿರುವ ನಂದಿ ಬೆಟ್ಟಕ್ಕೆ ಭೇಟಿ ನೀಡಿದವರೊಬ್ಬರು, ಟಿಪ್ಪು ಬೇಸಿಗೆ ಅರಮನೆಯ ಗೋಡೆಯ ಮೇಲೆ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬರೆದಿರುವುದನ್ನು ಗಮನಿಸಿದ್ದಾರೆ.
ಈ ಬರಹದ ವಿಡಿಯೋಗಳು ಮತ್ತು ಫೊಟೋಗಳು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಬರಹದ ಮೇಲೆ ಬಣ್ಣ ಬಳಿದಿದ್ದಾರೆ.
ವಿಷಯ ಬೆಳಕಿಗೆ ಬಂದ ತಕ್ಷಣ ಎಎಸ್‌ಐ ಅಧಿಕಾರಿಗಳು ಗೋಡೆ ಬರಹವನ್ನು ಅಳಿಸಿಹಾಕಿದರು. ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ನಾವು ದುಷ್ಕರ್ಮಿಗಳ ವಿರುದ್ಧ ಅತಿಕ್ರಮಣ, ಸಾರ್ವಜನಿಕ ದುಷ್ಕೃತ್ಯ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಗಾಗಿ ಪ್ರಕರಣ ದಾಖಲಿಸಿದ್ದೇವೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಯಾರೆಂದು ಇನ್ನೂ ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಕಾರಣರಾದವರನ್ನು ಗುರುತಿಸಲು ಆ ಪ್ರದೇಶ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ | ಪ್ರೇಯಸಿ ಜೊತೆ ಸರಸವಾಡುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ.. ವಿಡಿಯೋ ವೈರಲ್!



















