ಝಾನ್ಸಿ: ಕನ್ನಡಿಯ ಮೇಲೆ ಲಿಪ್‌ಸ್ಟಿಕ್‌ನಲ್ಲಿ “ಐ ಕ್ವಿಟ್” ಎಂದು ಬರೆದು ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ(Suicide News) ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
23 ವರ್ಷದ ಕಾನೂನು ವಿದ್ಯಾರ್ಥಿನಿ ತನ್ನ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾಳೆ. ತಾನು ಪ್ರೀತಿಸುತ್ತಿದ್ದ ಸ್ಥಳೀಯ ದಂತ ವೈದ್ಯರೊಬ್ಬರ ಮನೆಯಿಂದ ವಾಪಸಾದ ಕೂಡಲೇ ಆಕೆ ಈ ಕೃತ್ಯ ಎಸಗಿದ್ದಾಳೆ. ದಂತ ವೈದ್ಯ ಮತ್ತು ಆತನ ಸಂಬಂಧಿಕರು ನೀಡಿದ ಮಾನಸಿಕ ಚಿತ್ರಹಿಂಸೆ ತಾಳಲಾರದೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾರ್ಥಿನಿಯ ಕುಟುಂಬ ಆರೋಪಿಸಿದೆ.
ಮೃತ ವಿದ್ಯಾರ್ಥಿನಿಯನ್ನು 23 ವರ್ಷದ ದಾನಿಶ್ ಆರಾ ಎಂದು ಗುರುತಿಸಲಾಗಿದೆ. ಈಕೆ ಝಾನ್ಸಿಯಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದಾನಿಶ್ ಆರಾ ತನ್ನ ಚಿಕಿತ್ಸೆಯ ಸಂದರ್ಭದಲ್ಲಿ ಆಸಾದ್ ಎಂಬ ದಂತ ವೈದ್ಯನನ್ನು 4-5 ತಿಂಗಳ ಹಿಂದೆ ಭೇಟಿಯಾಗಿದ್ದಳು. ತದನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಸಾದ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ದಾನಿಶ್ ಕುಟುಂಬ ತಿಳಿಸಿದೆ. ಆದರೆ, ನಂತರ ಆಸಾದ್ ಬೇರೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಘಟನೆ ನಡೆದ ದಿನ ಆಸಾದ್ ಮತ್ತು ಆತನ ಕುಟುಂಬದವರು ದಾನಿಶ್ ಆರಾಳನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದರು. ಮನೆಗೆ ಬಂದ ಆಕೆಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಕಿರುಕುಳ ನೀಡಿದೆ. ಆಕೆಯ ಮೊಬೈಲ್ ಫೋನ್ ಮತ್ತು ವಾಹನದ ಕೀಗಳನ್ನು ಕಿತ್ತುಕೊಂಡು, ಚಿತ್ರಹಿಂಸೆ ನೀಡಿದ್ದಾರೆ. ಈ ಘಟನೆಯಿಂದ ಆಘಾತಗೊಂಡ ಆರಾ ಮನೆಗೆ ಮರಳಿದ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ, ಆತ್ಮಹತ್ಯೆಗೆ ಶರಣಾದಳು ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಜೊತೆಗೆ, ಆಸಾದ್ ಇದೇ ಮೊದಲ ಬಾರಿಗೆ ಅಲ್ಲ, ಈ ಹಿಂದೆಯೂ ಹಲವು ಹೆಣ್ಣುಮಕ್ಕಳ ಜೀವನವನ್ನು ಹಾಳು ಮಾಡಿದ್ದಾನೆ ಎಂದೂ ಅವರು ಆರೋಪಿಸಿದ್ದಾರೆ. ಇದೇ ವೇಳೆ, ಆಸಾದ್‌ನ ನಿಶ್ಚಿತಾರ್ಥ ಕಾರ್ಯಕ್ರಮದ ವೇಳೆ ಮತ್ತೊಬ್ಬ ಯುವತಿಯೂ ಅಲ್ಲಿಗೆ ಆಗಮಿಸಿ ತನಗೆ ಮೋಸ ಮಾಡಿದ್ದಾಗಿ ಆರೋಪಿಸಿ ಗದ್ದಲವೆಬ್ಬಿಸಿದ್ದಳು. ಅವನು ಇದೇ ರೀತಿ ಹಲವರಿಗೆ ವಂಚಿಸಿದ್ದಾನೆ. ಚಿಕಿತ್ಸೆ ನೀಡುವ ನೆಪದಲ್ಲಿ ನನ್ನ ಮಗಳ ಹಾದಿ ತಪ್ಪಿಸಿದ್ದಾನೆ ಎಂದೂ ಹೇಳಿ ಆರಾಳ ತಾಯಿ ಕಣ್ಣೀರು ಹಾಕಿದ್ದಾರೆ.
ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದಾನಿಶ್ ಆರಾಳ ಕೊಠಡಿಯಲ್ಲಿ ಕನ್ನಡಿಯ ಮೇಲೆ ಲಿಪ್‌ಸ್ಟಿಕ್‌ನಲ್ಲಿ “ಐ ಕ್ವಿಟ್” ಎಂಬ ಸಂದೇಶ ಬರೆದಿತ್ತು. ಇದು ಆಕೆಯ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ತನಿಖೆ ಆರಂಭವಾಗಿದ್ದು, ಆಸಾದ್ ಮತ್ತು ಆತನ ಕುಟುಂಬದವರ ವಿರುದ್ಧ ಕಾನೂನು ಕ್ರಮಕ್ಕೆ ಕುಟುಂಬವು ಒತ್ತಾಯಿಸಿದೆ. ಯುವತಿಯ ಆತ್ಮಹತ್ಯೆಯ ಹಿಂದಿನ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಎಲ್ಲ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.