ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಕಾನೂನು ಪದವಿ ಮುಗಿಸಿದ್ದರೆ, ಮಾಸಿಕ 5 ಸಾವಿರ ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾನೂನು ಪದವಿಧರರಿಗೆ ಸ್ಟೈಪೆಂಡ್ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಶಿಷ್ಯವೇತನ ಪಡೆಯಬಹುದು.
ಕಾನೂನು ಪದವಿ ಮುಗಿಸುತ್ತಲೇ ವಕೀಲಿಕೆ ಮಾಡಲು ಅವಕಾಶ ಸಿಗುವುದಿಲ್ಲ. ಯಾವುದಾದರೂ ಹಿರಿಯ ವಕೀಲರ ಬಳಿ ತರಬೇತಿ ಪಡೆಯಲು ಸಹಾಯಕರಾಗಿ ಕೆಲಸ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಮಾಸಿಕ 5 ಸಾವಿರ ರೂಪಾಯಿ ಹಣಕಾಸು ನೆರವು ನೀಡಲಾಗುತ್ತದೆ. ನಾಲ್ಕು ವರ್ಷಗಳ ಅವಧಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಗಳಾಗಿದ್ದು, ಕಾನೂನು ಪದವಿ ಪಡೆದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಾಗಿದ್ದು, ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಗರಿಷ್ಠ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ನ ಪ್ರತಿ, ಕಾನೂನು ಪದವಿ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
– ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುವ https://swd.karnataka.gov.in/ ಗೆ ಭೇಟಿ ನೀಡಬೇಕು.
– ಆಧಾರ್ ಕಾರ್ಡ್ ಬಳಸಿಕೊಂಡು ನೋಂದಣಿ ಮಾಡಿಕೊಂಡು, ಅಗತ್ಯ ವಿವರ ಭರ್ತಿ ಮಾಡಬೇಕು.
– ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು.
– ರಿಜಿಸ್ಟರ್ ಮಾಡಿಕೊಂಡ ಬಳಿಕ ಮೊಬೈಲಿಗೆ ಕನ್ಫರ್ಮೇಷನ್ ಮೆಸೇಜ್ ಬರುತ್ತದೆ. ಆಗ ಅರ್ಜಿಯ ಸ್ವೀಕೃತಿ ನಮೂನೆಯನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಬೇಕು.
 
                                 
			 
			
 
                                 
                                


















