ನವದೆಹಲಿ: ಬೈಕ್ ಟ್ಯಾಕ್ಸಿ ಓಡಿಸಿಕೊಂಡು ಬದುಕು ಸಾಗಿಸುತ್ತಿರುವ ಸಾಮಾನ್ಯ ರ‍್ಯಾಪಿಡೋ (Rapido) ಚಾಲಕನೊಬ್ಬನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 331 ಕೋಟಿ ರೂ. ಜಮೆ ಆಗಿರುವ ಸ್ಫೋಟಕ ಸುದ್ದಿ ಈಗ ಬಯಲಾಗಿದೆ. ಈ ಹಣವನ್ನು ಅಕ್ರಮ ಬೆಟ್ಟಿಂಗ್ ದಂಧೆಯಿಂದ ಗಳಿಸಲಾಗಿದ್ದು, ರಾಜಸ್ಥಾನದ ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಮದುವೆಗೆ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಪತ್ತೆ ಮಾಡಿದೆ.
‘1xBet’ ಎಂಬ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆಯ ತನಿಖೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು, ನವದೆಹಲಿಯ ಸ್ಲಂ ವೊಂದರಲ್ಲಿ ವಾಸಿಸುವ ಬಡ ಚಾಲಕನ ಖಾತೆಗೆ ಕೋಟಿಗಟ್ಟಲೆ ಹಣ ಹರಿದುಬಂದಿರುವುದನ್ನು ಕಂಡು ದಂಗಾಗಿದ್ದಾರೆ.
ದೆಹಲಿಯ ರ‍್ಯಾಪಿಡೋ ಚಾಲಕನ ಖಾತೆಗೆ 2024ರ ಆಗಸ್ಟ್ 19 ರಿಂದ 2025ರ ಏಪ್ರಿಲ್ 16 ರ ನಡುವೆ ಒಟ್ಟು 331.36 ಕೋಟಿ ರೂ. ಜಮೆಯಾಗಿದೆ.
ಮ್ಯೂಲ್ ಖಾತೆ (Mule Account): ಈ ಚಾಲಕನಿಗೆ ತಿಳಿಯದಂತೆಯೇ ಆತನ ಖಾತೆಯನ್ನು ‘ಮ್ಯೂಲ್’ (ಕಪ್ಪು ಹಣ ವರ್ಗಾವಣೆಗೆ ಬಳಸುವ ಮಧ್ಯವರ್ತಿ ಖಾತೆ) ಆಗಿ ಬಳಸಿಕೊಳ್ಳಲಾಗಿದೆ.
ರಾಜವೈಭವದ ಮದುವೆ: ಈ ಖಾತೆಯಿಂದ 1 ಕೋಟಿ ರೂ.ಗೂ ಹೆಚ್ಚು ಹಣವನ್ನು ಉದಯಪುರದ ತಾಜ್ ಅರಾವಳಿ ರೆಸಾರ್ಟ್‌ನಲ್ಲಿ ನಡೆದ ಅದ್ಧೂರಿ ವಿವಾಹಕ್ಕೆ ವರ್ಗಾಯಿಸಲಾಗಿದೆ. ನವೆಂಬರ್ 2024 ರಲ್ಲಿ ನಡೆದ ಈ ಮದುವೆ ಗುಜರಾತ್‌ನ ಯುವ ರಾಜಕಾರಣಿ ಆದಿತ್ಯ ಜುಲಾ ಅವರದ್ದು ಎಂದು ಹೇಳಲಾಗುತ್ತಿದೆ.
ರಾಜಕಾರಣಿಗೆ ಸಂಕಷ್ಟ?
ಈ ಪ್ರಕರಣದಲ್ಲಿ ಗುಜರಾತ್‌ನ ಯುವ ರಾಜಕಾರಣಿ ಆದಿತ್ಯ ಜುಲಾ ಅವರ ಹೆಸರು ಕೇಳಿಬಂದಿದ್ದು, ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಮದುವೆಯ ಖರ್ಚಿಗೆ ಬಳಸಲಾದ ಹಣಕ್ಕೂ, ರ‍್ಯಾಪಿಡೋ ಚಾಲಕನಿಗೂ ಯಾವುದೇ ಸಂಬಂಧವಿಲ್ಲ. ಆದರೂ ಚಾಲಕನ ಖಾತೆಯಿಂದ ನೇರವಾಗಿ ಹೋಟೆಲ್‌ಗೆ ಹಣ ಪಾವತಿಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಮಾಯಕರೇ ಟಾರ್ಗೆಟ್!
ಸೈಬರ್ ಕಳ್ಳರು ಮತ್ತು ಹವಾಲಾ ದಂಧೆಕೋರರು ಬಡವರು, ಕೂಲಿ ಕಾರ್ಮಿಕರು ಮತ್ತು ಆನ್‌ಲೈನ್ ಡೆಲಿವರಿ ಮಾಡುವವರನ್ನು ಗುರಿಯಾಗಿಸಿಕೊಂಡು, ಕಮಿಷನ್ ಆಸೆ ತೋರಿಸಿ ಅಥವಾ ಅವರಿಗೆ ಗೊತ್ತಿಲ್ಲದಂತೆಯೇ ಅವರ ಬ್ಯಾಂಕ್ ಖಾತೆಗಳನ್ನು ಇಂತಹ ಅಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ.
ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ ವಿವರ, ಎಟಿಎಂ ಪಿನ್ ಅಥವಾ ಒಟಿಪಿಯನ್ನು (OTP) ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಸಣ್ಣ ಕಮಿಷನ್ ಆಸೆಗೆ ಬಿದ್ದು ಖಾತೆ ಬಾಡಿಗೆಗೆ ನೀಡಿದರೆ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಬಾಂಬ್ ಸ್ಫೋಟ ಪ್ರಕರಣ : ಪ್ರೀತಿಯ ಬಲೆಯಲ್ಲಿ ಬಿದ್ದು ಭಯೋತ್ಪಾದನೆಗೆ ಜಾರಿದ ವೈದ್ಯರ ಕಥೆ!


















