ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ವತಿಯಿಂದ ಭೀಮ ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಏ. 14 ರಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಘಟಕದಿಂದ ಭೀಮ ಹೆಜ್ಜೆ 100 ರ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಪ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗದಲ್ಲಿನ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ ಸುಮಾರು 500 ಬೈಕ್ ಗಳಲ್ಲಿ, ಜಾಥಾ ಆರಂಭವಾಗಿದೆ. ಬೆಂಗಳೂರಿನಿಂದ ನಿಪ್ಪಾಣಿಯವರೆಗೂ ಜಾಥಾ ತೆರಳಲಿದೆ. ಮೂರು ದಿನಗಳ ಕಾಲ ಈ ಬೈಕ್ ಜಾಥಾ ನಡೆಯಲಿದೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಪ್ರಯಾಣವನ್ನು ಬೈಕ್ ಸವಾರರು ಬೆಳೆಸಲಿದ್ದಾರೆ. ನಾಳೆ ಚಿತ್ರದುರ್ಗದಿಂದ ಹುಬ್ಬಳ್ಳಿಗೆ ಜಾಥಾ ತೆರಳಲಿದೆ. ನಾಡಿದ್ದು ಹುಬ್ಬಳ್ಳಿಯಿಂದ ನಿಪ್ಪಾಣಿ ಕಡೆಗೆ ಜಾಥಾ ಪ್ರಯಾಣ ಬೆಳೆಸಲಿದೆ.
ಏ. 15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಬೈಕ್ ಜಾಥಾ ಸಂದರ್ಭದಲ್ಲಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಹಾಗೂ ಸಂವಿಧಾನದ ಅಂಶಗಳನ್ನು ಪ್ರಚಾರ ಮಾಡಲು ನಿರ್ಧಾರ ಮಾಡಲಾಗಿದೆ. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ವಹಿಸಿಕೊಂಡಿದ್ದಾರೆ.