ಬೆಂಗಳೂರು: ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಈಗ ಸಿದ್ಧತೆಗಳು ನಡೆಯುತ್ತಿವೆ. ಇಂದು ಸಂಜೆ 5 ಗಂಟೆ ಹೊತ್ತಿಗೆ ದಾವಣಗೆರೆಯೆ ಕಲ್ಲೇಶ್ವರ ರೈಸ್ ಮಿಲ್ ಜಾಗದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ನಿರ್ಧರಿಸಿದೆ.
ಸದ್ಯ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ದಾವಣಗೆರೆ ತಲುಪಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವರ ಪುತ್ರ ಎಸ್ಎಸ್ ಮಲ್ಲಿಕಾರ್ಜುನ ಅವರ ಮನೆಯಲ್ಲಿ ಇಡಲಾಗುತ್ತೆ. ನಂತರ ಹೈಸ್ಕೂಲ್ ಮೈದಾನದಲ್ಲಿ ಸಂಜೆ 4ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಅಂತ್ಯಕ್ರಿಯೆ ಬಗ್ಗೆ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಣಬೇರು ರಾಜಣ್ಣ ಎಂಬುವವರು ಮಾತನಾಡಿದ್ದು, ಬೆಳಿಗ್ಗೆ 10:30ರ ನಂತರ ವೀರಶೈವ ಮಹಾಸಭಾದಲ್ಲಿ ಅಂತಿಮ ಗೌರವ ಸಲ್ಲಿಸಿ, ಅರ್ಧ ಗಂಟೆ ಅಲ್ಲಿಯೇ ಇಡಲಾಗುತ್ತೆ. ಇಂದು ಸಂಜೆಯೊಳಗೆ ಕಲ್ಲೇಶ್ವರ ರೈಸ್ ಮಿಲ್ ಜಾಗದಲ್ಲಿ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ ನಡೆಸಲಾಗುತ್ತೆ ಎಂದಿದ್ದಾರೆ.
ಸಾರ್ವಜನಿಕ ದರ್ಶನ ಮುಕ್ತಾಯವಾದ ನಂತರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ರೈಸ್ ಮಿಲ್ವರೆಗೆ ಅಂತಿಮ ಯಾತ್ರೆ ನಡೆಯಲಿದೆ.
ದಾವಣಗೆರೆಯ ಕಲ್ಲೇಶ್ವರ ಮಿಲ್ನ ಆವರಣದಲ್ಲಿರುವ ಅವರ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಸದ್ಯ ಆಪ್ತರು ಸಿದ್ದತೆ ನಡೆಸಿದ್ದಾರೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಇನ್ನು ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ವಿವಿಐಪಿಗಳು ಆಗಮಿಸಲಿದ್ದಾರೆ. ಒಂದು ನೂರಕ್ಕೂ ಹೆಚ್ಚು ಪಂಚಪೀಠ ಮತ್ತು ವಿರಕ್ತಮಠಗಳ ಸ್ವಾಮೀಜಿಗಳು ಭಾಗಿ ಆಗಲಿದ್ದಾರೆ. ಹೀಗಾಗಿ, ಎಂಬಿಎ ಕಾಲೇಜ್, ಐಟಿಐ ಕಾಲೇಜ್ ಐದು ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ.
ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ಗೆ ನಿಯೋಜಿಸಲಾಗಿದೆ. ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂತಿಮ ದರ್ಶನಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ನಿಧನ | ಇಂದು ದಾವಾಣಗೆರೆ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ



















