ಇಸ್ಲಾಮಾಬಾದ್: ಲಷ್ಕರ್-ಎ-ತೈಬಾ(Lashkar-e-Taiba) ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡುತ್ತಿದ್ದ ಹಾಗೂ ಉಗ್ರ ಹಫೀಜ್ ಸಯೀದ್‌ನ ಆಪ್ತನನ್ನು ಈದ್-ಉಲ್-ಫಿತರ್ ದಿನದಂದೇ ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಮೃತನನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಬೈಕ್‌ನಲ್ಲಿ ಬಂದ ಇಬ್ಬರು ದಾಳಿಕೋರರು ಅಂಗಡಿಯೊಂದರಲ್ಲಿ ನಿಂತಿದ್ದ ರೆಹಮಾನ್ ಮೇಲೆ ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಹಾಡಹಗಲೇ ಈ ದಾಳಿ ನಡೆದಿದ್ದು, ಹತ್ಯೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral News) ಆಗಿವೆ.
ವರದಿಗಳ ಪ್ರಕಾರ, ರೆಹಮಾನ್ ಲಷ್ಕರ್-ಎ-ತೈಬಾಗೆ ಪ್ರಮುಖ ಹಣಕಾಸಿನ ಮೂಲವಾಗಿದ್ದ. ಈತನೇ ಸಂಘಟನೆಗೆ ಬೇಕಾದ ಹಣಕಾಸು ನೆರವು ಒದಗಿಸುತ್ತಿದ್ದ. ಪಾಕಿಸ್ತಾನ ಮತ್ತು ಭಾರತದಾದ್ಯಂತ ವಿವಿಧ ದಾಳಿಗಳಲ್ಲಿ ಭಾಗಿಯಾಗಿರುವ ಕಾರಣ ಹಲವು ದೇಶಗಳಿಂದ “ಭಯೋತ್ಪಾದಕ ಸಂಘಟನೆ” ಎಂದು ಘೋಷಿಸಲ್ಪಟ್ಟಿರುವ ಲಷ್ಕರ್‌ಗೆ ಆರ್ಥಿಕ ಬೆಂಬಲವನ್ನು ನೀಡುವೇದ ಈತನ ಪ್ರಾಥಮಿಕ ಜವಾಬ್ದಾರಿಯಾಗಿತ್ತು.
ಲಷ್ಕರ್ ಸಂಘಟನೆಯ ನಿಧಿ ಸಂಗ್ರಹ ಕಾರ್ಯಾಚರಣೆಯಲ್ಲಿ ಪ್ರಮುಖನಾಗಿ ಗುರುತಿಸಿಕೊಂಡಿದ್ದ ಕಾರಣ ರೆಹಮಾನ್ ಕರಾಚಿಯಲ್ಲಿ ಗಮನಾರ್ಹ ಪ್ರಭಾವ ಹೊಂದಿದ್ದ. ವಿವಿಧ ಪ್ರದೇಶಗಳಿಂದ ನಿಧಿ ಸಂಗ್ರಾಹಕರು ಸಂಗ್ರಹಿಸಿದ ಮೊತ್ತವನ್ನು ತಂದು ರೆಹಮಾನ್ ಕೈಗೆ ಕೊಡುತ್ತಿದ್ದರು. ನಂತರ ರೆಹಮಾನ್ ಅದನ್ನು ಲಷ್ಕರ್ ಸಂಘಟನೆಯ ಉನ್ನತ ಅಧಿಕಾರಿಗಳಿಗೆ ವರ್ಗಾಯಿಸುತ್ತಿದ್ದ. ಹಣಕಾಸಿನ ವಿಚಾರದಲ್ಲಿ ಆತನಿಗಿದ್ದ ಸಂಪರ್ಕ ಮತ್ತು ನಿರ್ವಹಣಾ ಕೌಶಲ್ಯದಿಂದಾಗಿಯೇ ಆತ ಲಷ್ಕರ್ ಕಾರ್ಯಾಚರಣೆಯ ನಿರ್ಣಾಯಕ ಆಸ್ತಿಯಾಗಿ ಮಾರ್ಪಟ್ಟಿದ್ದ ಎಂದು ಹೇಳಲಾಗಿದೆ.
ಎಲ್ಇಟಿ ಉಗ್ರ ಅಬು ಖತಲ್ ಹತ್ಯೆ
ಹಫೀಜ್ ಸಯೀದ್‌ನ ಆಪ್ತ ಸಹಚರನಾಗಿದ್ದ, ಉಗ್ರ ಅಬು ಖತಲ್ ಹತ್ಯೆಯ ಬೆನ್ನಲ್ಲೇ ಈ ಹತ್ಯೆ ನಡೆದಿದೆ. ಮಾರ್ಚ್ 16 ರಂದು ಪಾಕಿಸ್ತಾನದಲ್ಲಿ ಖತಲ್ ಸಿಂಧಿ ಎಂದೂ ಕರೆಯಲ್ಪಡುವ ಅಬು ಖತಲ್ ನನ್ನು ಅಪರಿಚಿತ ದುಷ್ಕರ್ಮಿಗಳು ಕೊಲೆಗೈದಿದ್ದರು. 2017 ರ ರಿಯಾಸಿ ಬಾಂಬ್ ಸ್ಫೋಟ ಮತ್ತು 2023 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲಿನ ದಾಳಿ ಸೇರಿದಂತೆ ಹಲವಾರು ಪ್ರಮುಖ ದಾಳಿಗಳಲ್ಲಿ ಈತ ಭಾಗಿಯಾಗಿದ್ದ.
ಖತಲ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇಬ್ಬರು ಅಪರಿಚಿತ ದಾಳಿಕೋರರು ಬಂದು, ಖತಲ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಈತ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾರತಕ್ಕೆ ಬೇಕಾಗಿದ್ದ. ಹೀಗಾಗಿ ಈತನ ಹತ್ಯೆಯು ಭಾರತೀಯ ಸಂಸ್ಥೆಗಳ ದೀರ್ಘಕಾಲದ ಕಾಯುವಿಕೆಗೆ ಅಂತ್ಯ ಹಾಡಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಿ, ಅದನ್ನುಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅಬು ಖತಲ್ ನನ್ನು ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಲಾಗಿತ್ತು. ಅಲ್ಲಿಂದ ನಂತರ ಆತನ ಚಲನವಲನಗಳ ಮೇಲೆ ಭಾರತೀಯ ಸಂಸ್ಥೆಗಳು ಕಣ್ಣಿಟ್ಟಿದ್ದವು.