ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಶಾಲೆಯ ಸಮೀಪ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಶಾಲೆಯ ಸಮೀಪದ ಪೊದೆಗಳಲ್ಲಿ ಬರೋಬ್ಬರಿ 161 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಪೊಲೀಸರು ಇಡೀ ಅಲ್ಮೋರಾ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಹರ್ಯಾಣದಲ್ಲಿ ಇತ್ತೀಚೆಗೆ ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ಸ್ಫೋಟಕಗಳು ಸಿಕ್ಕ ಬೆನ್ನಲ್ಲೇ ಈ ಘಟನೆ ನಡೆದಿರುವುದು ಭದ್ರತಾ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಅಲ್ಮೋರಾ ಜಿಲ್ಲೆಯ ಸುಲ್ತ್ ಪ್ರದೇಶದ ದಬಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಳಿ ಈ ಸ್ಫೋಟಕಗಳು ಪತ್ತೆಯಾಗಿವೆ. ಶಾಲೆಯ ಪ್ರಾಂಶುಪಾಲರಾದ ಸುಭಾಷ್ ಸಿಂಗ್ ಅವರು ಶಾಲಾ ಆವರಣದ ಹೊರಗಿನ ಪೊದೆಗಳಲ್ಲಿ ಕೆಲವು ಅನುಮಾನಾಸ್ಪದ ಪ್ಯಾಕೆಟ್‌ಗಳನ್ನು ಮೊದಲು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಎರಡು ಪೊಲೀಸ್ ತಂಡಗಳು ಶಾಲೆಗೆ ಧಾವಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಯ ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರಿದು ತಪಾಸಣೆ ಆರಂಭಿಸಿವೆ.
ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಾಚರಣೆ
ಸ್ಫೋಟಕಗಳಿರುವ ಶಂಕೆ ವ್ಯಕ್ತವಾದ್ದರಿಂದ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳಿಂದ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಮತ್ತು ಶ್ವಾನ ದಳವನ್ನು (Dog Squad) ತುರ್ತಾಗಿ ಕರೆಸಲಾಯಿತು. ಶ್ವಾನ ದಳದ ಸಹಾಯದಿಂದ ನಡೆಸಲಾದ ತೀವ್ರ ಶೋಧ ಕಾರ್ಯಾಚರಣೆಯ ವೇಳೆ, ಶಾಲೆಯ ಸಮೀಪದ ಪೊದೆಯೊಂದರಲ್ಲಿ ಜಿಲೆಟಿನ್ ಕಡ್ಡಿಗಳಿದ್ದ ಕೆಲವು ಪ್ಯಾಕೆಟ್‌ಗಳು ಪತ್ತೆಯಾಗಿವೆ. ಇದಾದ ಬಳಿಕ ಸುಮಾರು 20 ಅಡಿ ದೂರದಲ್ಲಿ ನಡೆಸಲಾದ ಶೋಧದಲ್ಲಿ ಮತ್ತಷ್ಟು ಪ್ಯಾಕೆಟ್‌ಗಳು ಕಂಡುಬಂದಿವೆ. ಒಟ್ಟು 20 ಕೆಜಿಗೂ ಅಧಿಕ ತೂಕದ 161 ಜಿಲೆಟಿನ್ ಕಡ್ಡಿಗಳನ್ನು ಬಾಂಬ್ ನಿಷ್ಕ್ರಿಯ ದಳ ವಶಪಡಿಸಿಕೊಂಡು ಸುರಕ್ಷಿತವಾಗಿ ಸೀಲ್ ಮಾಡಿದೆ.
ಪೊಲೀಸ್ ಅಧಿಕಾರಿಗಳ ಪ್ರತಿಕ್ರಿಯೆ
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದೇವೇಂದ್ರ ಪಿಂಚಾ, ದಬಾರ ಗ್ರಾಮದ ಶಾಲೆಯ ಬಳಿ 161 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ದೃಢಪಡಿಸಿದ್ದಾರೆ. ಸಾಮಾನ್ಯವಾಗಿ ಜಿಲೆಟಿನ್ ಕಡ್ಡಿಗಳನ್ನು ಗಣಿಗಾರಿಕೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಬಂಡೆಗಳನ್ನು ಒಡೆಯಲು ಬಳಸಲಾಗುತ್ತದೆ. ಆದರೆ, ಇವುಗಳನ್ನು ಶಾಲೆಯ ಬಳಿ ತಂದು ಹಾಕಿದವರು ಯಾರು ಮತ್ತು ಇದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಪರಿಚಿತರ ವಿರುದ್ಧ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4(ಎ) ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಮತ್ತು ಹರ್ಯಾಣದಲ್ಲಿ ಭಯೋತ್ಪಾದಕ ಸಂಪರ್ಕದ ಶಂಕೆಯ ಮೇರೆಗೆ 3,000 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರ, ದೇಶಾದ್ಯಂತ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ. ಭಯೋತ್ಪಾದಕ ಗುಂಪುಗಳು ಪ್ರಮುಖ ನಗರಗಳಲ್ಲಿ ಸರಣಿ ಸ್ಫೋಟಗಳಿಗೆ ಸಂಚು ರೂಪಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ, ಉತ್ತರಾಖಂಡದ ಈ ಬೆಳವಣಿಗೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ: ಮಾಡಿದ್ದ ಸಾಲ ತೀರಿಸಲು ಖದೀಮರ ಮಾಸ್ಟರ್ ಪ್ಲ್ಯಾನ್ | ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ದರೋಡೆಯ ಗುಟ್ಟು



















