ದೋಡಾ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ಭೂ ಕುಸಿತ ಉಂಟಾಗಿದ್ದು, ಐವರು ಸಾವನ್ನಪ್ಪಿ, ಸುಮಾರು 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಪವಿತ್ರ ದೇವಾಲಯವಾದ ವೈಷ್ಣೋದೇವಿಗೆ ತೀರ್ಥಯಾತ್ರೆಯನ್ನು (Vaishno Devi Yatra) ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಅರ್ಧಕುವರಿಯ ಇಂದರಪ್ರಸ್ಥ ಭೋಜನಾಲಯದ ಬಳಿ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.



















