ಬೆಂಗಳೂರು : ನಗರದಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದಿ. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ವಿರುದ್ಧ ಎಫ್‌ಐಆರ್ ದಾಖಲಿಸಿ, ನೋಟಿಸ್ ಜಾರಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಇತ್ತ ರಿಕ್ಕಿ ರೈ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದಾರೆ.
ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಲ್ಯಾಬೋರ್ಗಿನಿ ಕಾರು (ಕೆಎ-05, ಎನ್‌ಆರ್-0009) ಶಿವಾಜಿನಗರ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತಕ್ಕೆ ಅತಿ ವೇಗವಾಗಿ ಬಂದಿತ್ತು. ಕಾರು ಚಾಲಕ ಅದೇ ವೃತ್ತದಲ್ಲಿ ಕಾರನ್ನು ಎರಡು ಸುತ್ತು ಅತಿ ವೇಗವಾಗಿ ತಿರುಗಿಸಿದ್ದ. ನಂತರ ಶಿವಾಜಿನಗರದ ಕಡೆಗೆ ಶರವೇಗದಲ್ಲಿ ಚಾಲನೆ ಮಾಡುತ್ತ ಹೋಗಿದ್ದ. ಕಾರು ಚಾಲಕನ ಅಪಾಯಕಾರಿ ಚಾಲನೆಯ ವಿಡಿಯೋ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬೆನ್ನಲ್ಲೇ ಪೊಲೀಸರು ಕಾರು ಸಂಚರಿಸಿದ ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿತ್ತು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿರುದ್ಧ IMV 184, 189,BNS 281 ಅಡಿ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ವಿಚಾರಣಗೆ ಹಾಜರಾಗುವಂತೆ ನೋಟೀಸ್ ಕೂಡ ನೀಡಿದ್ದರು. ಇದರ ಬೆನ್ನಲ್ಲೇ ರಿಕ್ಕಿ ರೈ ನಿರೀಕ್ಷಣಾ ಜಾಮೀನು ಮೊರೆ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ನಿಂದ ರಿಕ್ಕಿ ಜಾಮೀನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಮೂಡುಬಿದರೆ ಇನ್ಸ್‌ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ – ಗೃಹ ಸಚಿವ ಪರಮೇಶ್ವರ್



















