ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳಿರುವಾಗ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷದ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಹಿನ್ನಡೆಯಾಗಿದೆ. ಐಆರ್ಸಿಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಲಾಲು ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ವಿರುದ್ಧ ಆರೋಪಗಳನ್ನು ನಿಗದಿಪಡಿಸಿದೆ.
ಬಿಹಾರದ ಹೈ-ವೋಲ್ಟೇಜ್ ಚುನಾವಣೆಗೆ ಮುನ್ನ, ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪುತ್ರ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಗಳನ್ನು ನಿಗದಿಪಡಿಸಿದೆ. ಮೋಸ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ. ಆದರೆ, ಲಾಲು ಯಾದವ್ ಮತ್ತು ಅವರ ಕುಟುಂಬ ಸದಸ್ಯರು ತಾವು ನಿರಪರಾಧಿಗಳೆಂದು ಹೇಳಿದ್ದು, ವಿಚಾರಣೆಯನ್ನು ಎದುರಿಸುವುದಾಗಿ ತಿಳಿಸಿದ್ದಾರೆ.
“ಏನಿದು ಪ್ರಕರಣ?”
2004 ರಿಂದ 2009ರವರೆಗೆ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಐಆರ್ಸಿಟಿಸಿ ಹೋಟೆಲ್ಗಳ ನಿರ್ವಹಣಾ ಗುತ್ತಿಗೆಯನ್ನು ಹಂಚಿಕೆ ಮಾಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಐಆರ್ಸಿಟಿಸಿಯ ಎರಡು ಹೋಟೆಲ್ಗಳಾದ ಬಿಎನ್ಆರ್ ರಾಂಚಿ ಮತ್ತು ಬಿಎನ್ಆರ್ ಪುರಿಗಳ ನಿರ್ವಹಣಾ ಗುತ್ತಿಗೆಯನ್ನು ಸುಜಾತಾ ಹೋಟೆಲ್ಗೆ ನೀಡಲಾಗಿತ್ತು. ಈ ಒಪ್ಪಂದಕ್ಕೆ ಪ್ರತಿಯಾಗಿ, ಲಾಲು ಯಾದವ್ ಅವರು ಬೇನಾಮಿ ಕಂಪನಿಯ ಮೂಲಕ ಮೂರು ಎಕರೆ ಪ್ರಮುಖ ಭೂಮಿಯನ್ನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
2017ರಲ್ಲಿ ಸಿಬಿಐ ಲಾಲು ಯಾದವ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಎಲ್ಲಾ ಆರೋಪಿಗಳ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಲಾಲು ಪರ ವಕೀಲರು, ಆರೋಪ ಹೊರಿಸಲು ಯಾವುದೇ ಆಧಾರಗಳಿಲ್ಲ ಮತ್ತು ಟೆಂಡರ್ಗಳನ್ನು ನ್ಯಾಯಯುತವಾಗಿ ನೀಡಲಾಗಿದೆ ಎಂದು ವಾದಿಸಿದ್ದರು.
ನ್ಯಾಯಾಲಯವು, “ಸಂಭವನೀಯ ವಂಚನೆಯನ್ನು ಮೋಸ ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕು” ಮತ್ತು ಬೊಕ್ಕಸಕ್ಕೆ ಉಂಟಾದ ನಷ್ಟವು ಕೇವಲ ಅಲಂಕಾರಿಕ ಪದವಲ್ಲ, ಅದು ವಿತ್ತೀಯ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದೆ. “ಪಿತೂರಿಯು ಸೂಕ್ಷ್ಮವಾಗಿದ್ದರೂ, ಅದು ನ್ಯಾಯಾಲಯದ ದೃಷ್ಟಿಯಿಂದ ಮರೆಯಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಲಾಲು ಯಾದವ್ ಇತರ ಆರೋಪಿಗಳೊಂದಿಗೆ ಸೇರಿ ಪಿತೂರಿ ನಡೆಸಿ, ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಟೆಂಡರ್ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
“ಆರ್ಜೆಡಿಗೆ ರಾಜಕೀಯ ಹಿನ್ನಡೆ”
ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಆರ್ಜೆಡಿಗೆ ನ್ಯಾಯಾಲಯದ ಈ ಆದೇಶವು ದೊಡ್ಡ ಹಿನ್ನಡೆಯಾಗಿದೆ. ಈ ತೀರ್ಪು, ಆರ್ಜೆಡಿಯ ರಾಜಕೀಯ ವಿರೋಧಿಗಳಿಗೆ ಭ್ರಷ್ಟಾಚಾರದ ವಿಷಯದಲ್ಲಿ ಇಂಡಿಯಾ ಒಕ್ಕೂಟದ ಮೇಲೆ ದಾಳಿ ನಡೆಸಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.



















