ಬಾಗಲಕೋಟೆ: ದೇವರಿಗೆ ಹಲವೆಡೆ ಹಲವು ರೀತಿಯ ನೈವೇದ್ಯಗಳನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ಹಾಗೂ ಕನಕರಾಯ ದೇವರಿಗೆ ಮಾತ್ರ ಎಣ್ಣೆ ನೈವೇದ್ಯ ಮಾಡಬೇಕು. ಹರಕೆ ತೀರಬೇಕಾದರೆ ಈ ದೇವರಿಗೆ ಎಣ್ಣೆ ನೈವೇದ್ಯ ಮಾಡಬೇಕೆಂಬ ಪ್ರತೀತಿ ನಡೆದುಕೊಂಡು ಬರುತ್ತಿದ್ದು, ಭಕ್ತರು ಎಣ್ಣೆ ನೈವೇದ್ಯ ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ.
600 ವರ್ಷಗಳ ಇತಿಹಾಸವಿರುವ ಲಕ್ಷ್ಮೀ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಿರುತ್ತಾರೆ. ತಮ್ಮ ಹರಕೆ ತೀರಿಸುವುದಕ್ಕಾಗಿ ಭಕ್ತರು ಮದ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಅಲ್ಲಿಗೆ ಬಂದ ಭಕ್ತರಿಗೂ ಸಾರಾಯಿಯೇ ತೀರ್ಥ. ಕನಕರಾಯ ದೇವಸ್ಥಾನದ ಮುಂದೆ ಕಳ್ಳಬಟ್ಟಿ ಸಾರಾಯಿ ಪ್ಯಾಕೆಟ್ ನ್ನು ರಾಶಿ ರಾಶಿಯಾಗಿಟ್ಟು ಮಾರಾಟ ಮಾರಾಟ ಮಾಡಲಾಗಿದೆ. ಈ ದೇವರ ಜಾತ್ರೆ ಶನಿವಾರ ನಡೆದಿದೆ. ಮದ್ಯವನ್ನು ಭಕ್ತರು ಕನಕರಾಯನಿಗೆ ಅರ್ಪಿಸಿ ತೀರ್ಥ ಅಂತ ಸೇವಿಸುತ್ತಿದ್ದರು. ದೇವರಿಗೆ ಎಣ್ಣೆ ಕಾಣಿಕೆ ಸಲ್ಲಿಸಿದರೂ ದೇವಸ್ಥಾನದ ಭಕ್ತರು ಮಾತ್ರ ಅದು ತೀರ್ಥ ಎಂದು ಹೇಳುತ್ತಿದ್ದರು.
ಬೇಡಿಕೆ ಈಡೇರಿದರೆ ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಎಣ್ಣೆ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ. ಕೆಲವರು ಹರಕೆ ತೀರಿಸೋಕೆ ಅಂತ ಮದ್ಯ ನೈವೇದ್ಯ ಅರ್ಪಿಸಿದರೆ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ತಂದಿರುತ್ತಾರೆ. ಹಲವರು ಎಣ್ಣೆಯ ಜಾತ್ರೆಯಲ್ಲಿ ಎಣ್ಣೆಯಲ್ಲಿ ತೇಲಿ ಹೋಗುತ್ತಾರೆ.