ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಾರಾಷ್ಟ್ರ ಚುನಾವಣೆಯಲ್ಲಿ ಮತ ಯಾಚಿಸುತ್ತಿದ್ದಾರೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ಚಂದಗಡ್ ವಿಧಾನಸಭಾ ಕ್ಷೇತ್ರದ ತುಡಯೆ ಗ್ರಾಮದಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಅಭ್ಯರ್ಥಿ ನಂದಾತಾಯಿ ಕುಪೆಕರ್ ಪರ ಪ್ರಚಾರ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರು ಮಹಾ ವಿಕಾಸ ಅಘಾಡಿಯನ್ನು ಬೆಂಬಲಿಸಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಯೋಜನೆಗಳು ಜನರನ್ನು ತಲುಪಿತ್ತಿವೆ. ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ 2 ಸಾವಿರ ರೂ. ಪಡೆಯುತ್ತಿದ್ದಾರೆ. ಉಚಿತವಾಗಿ ಬಸ್ ನಲ್ಲಿ ಸಂಚರಿಸುತ್ತಿದ್ದಾರೆ. ಉಚಿತವಾಗಿ ವಿದ್ಯುತ್ ನೀಡಲಾಗಿದೆ. ಪಂಚ ಗ್ಯಾರಂಟಿಗಳು ಅಲ್ಲಿನ ಜನರ ಬದುಕಿಗೆ ಆಸರೆಯಾಗಿವೆ ಎಂದು ಹೇಳಿದ್ದಾರೆ.
ಹೀಗಾಗಿ ನಿಮಗೂ ಕೂಡ ಈ ಯೋಜನೆಯ ಲಾಭವಾಗಬೇಕಾದರೆ, ಮಹಾ ವಿಕಾಸ ಅಘಾಡಿಗೆ ಮತ ನೀಡಿ. ಮಹಾರಾಷ್ಟ್ರದಲ್ಲಿ ಎಂವಿಎ ಅಧಿಕಾರಕ್ಕೆ ಬಂದರೆ, ಕರ್ನಾಟಕ ಸರ್ಕಾರ ಎಲ್ಲ ರೀತಿಯಲ್ಲಿ ಸಹಕಾರ ನೀಡಲಿದೆ ಎಂದಿದ್ದಾರೆ. ಈ ವೇಳೆ ಹಲವಾರು ಮುಖಂಡರು ಭಾಗವಹಿಸಿದ್ದರು.