ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಈಗ ಸ್ವಲ್ಪ ಮಟ್ಟಿಗೆ ತಗ್ಗಿದ ಹಿನ್ನಲೆ ಭೀಮಾ ನದಿಯ ಅಬ್ಬರವೂ ಕಡಿಮೆಯಾಗಿದೆ.ಆದರೂ ವಿಜಯಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ಕಳೆದ 10 ದಿನಗಳಿಂದ ಉಂಟಾದ ಭೀಮಾ ನದಿಯ ಪ್ರವಾಹದಿಂದ ಕಲಬುರಗಿ ಜಿಲ್ಲೆಯ ಮೂರು ತಾಲೂಕಿನ ಒಟ್ಟು 117 ಗ್ರಾಮಗಳು ನಲುಗಿ ಹೋಗಿವೆ. 58 ಕಾಳಜಿ ಕೇಂದ್ರಗಳಲ್ಲಿ 7,104 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದ್ದು, ಅಲ್ಲಿಂದ ತಮ್ಮ ಮನೆಗಳಿಗೆ ಮರಳಿದ ಜನ ಆಘಾತಕ್ಕೀಡಾಗಿದ್ದಾರೆ. ಇದೀಗ ಪ್ರವಾಹ ಕಡಿಮೆಯಾದ ಹಿನ್ನಲೆ ಸಂತ್ರಸ್ಥರು ಮನೆಗೆ ಬಂದು ಅಳಿದುಳಿದ ವಸ್ತುಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಕಲಬುರಗಿ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಅದರಲ್ಲಿಯೂ ಇನ್ನೇನು 15 ದಿನ ಕಳೆದರೆ ಕೈಗೆ ಬರಲಿದ್ದ ಹತ್ತಿ ಕೂಡಾ ಭೀಮಾನದಿಯ ಪಾಲಾಗಿದೆ. ಹೀಗಾಗಿ ಸರ್ಕಾರ ಪರಿಹಾರ ಕೊಡಲಿಲ್ಲ ಎಂದರೆ ನೇಣು ಹಾಕಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ರೈತರು ಕಣ್ಣಿರು ಹಾಕುತ್ತಿದ್ದಾರೆ.

ಭೀಮಾ ನದಿಯ ಪ್ರವಾಹಕ್ಕೆ ಜೆಸ್ಕಾಂ ಟ್ರಾನ್ಸಫಾರ್ಮರ್, ಎಲೆಕ್ಟ್ರಿಕ್ ಪೋಲ್ಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೀಮಾ ಹಾಗೂ ಕಾಗಿಣಾ ನದಿ ಪ್ರವಾಹದಿಂದ 270 ಟ್ರಾನಫಾರ್ಮರ್, 600 ಕ್ಕೂ ಹೆಚ್ಚು ಪೋಲ್ಗಳು ಹಾಳಾಗಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡು ಬಂದಿದ್ದು, ಈ ಮೂಲಕ ಜೆಸ್ಕಾಂ ಇಲಾಖೆಗೂ ಸಹ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿದೆ.
ಭೀಮಾ ನದಿ ಪ್ರವಾಹದ ವಿಚಾರವಾಗಿ 2500 ಕೋಟಿ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಸದ್ಯ ಸೂರು ಕಳೆದುಕೊಂಡವರಿಗೆ ಮನೆ ಹಾಗೂ ದವಸ ಧಾನ್ಯ ಕಳೆದುಕೊಂಡವರಿಗೆ ತುತ್ತು ಅನ್ನ ಕೊಡುವ ಕೆಲಸ ಮೊದಲು ಮಾಡಬೇಕಾಗಿದೆ.
“ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಮಾಂಜ್ರಾ”

ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ಮತ್ತು ಮಹಾರಾಷ್ಟ್ರದ ಧನೆಗಾಂವ್ ಡ್ಯಾಂನಿಂದ ನೀರು ಮಾಂಜ್ರಾ ನದಿಗೆ ನಿಂತರವಾಗಿ ನೀರನ್ನು ಹರಿಬಿಡಲಾಗುತ್ತಿದೆ. ಬೀದರ್ ತಾಲೂಕಿನ ಹಿಪ್ಪಳಗಾಂವದಲ್ಲಿ ಸುಮಾರು 12 ಎಕರೆಗೂ ಅಧಿಕ ಬೆಳೆ ಹಾನಿಯಾಗಿದೆ. ಸಾಲ ಮಾಡಿ ಬಿತ್ತಿದ ಬೆಳೆ ಕೈಗೆ ಬರುವಷ್ಟರಲ್ಲಿ ಮಣ್ಣು ಪಾಲಾಗುತ್ತಿದೆ. ಆದರೆ ಕಾಳಜಿ ಕೇಂದ್ರದಲ್ಲಿರುವ ಜನರು, ಸರ್ಕಾರ ನೆರವಿಗೆ ಬರಲಿ ಎಂದು ಕಾಯುತ್ತಿದ್ದಾರೆ. ಮನೆಯಲ್ಲಿನ ವಸ್ತುಗಳು ಎಲ್ಲವೂ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಜಿಲ್ಲಾಡಳಿತ ಸೂಕ್ತ ಸಹಾಯ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಹಲವು ಪ್ರವಾಹ ಪೀಡಿತ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಆಲಮೇಲ ತಾಲೂಕಿನ ಶಂಬೇವಾಡ ಗ್ರಾಮದ ಜನ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ಒಂದು ಕೊಳವೆ ಬಾವಿಯನ್ನಾದರೂ ಹಾಕಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.