ಚಾಮರಾಜನಗರ: ಲೇಡಿ ಪಿಎಸ್ ಐ ಟಾರ್ಚರ್ ಕೊಡುತ್ತಿದ್ದಾರೆಂದು ಆರೋಪಿಸಿ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ದುಷ್ಯಂತ್ ಎಂಬಾತ ಬಾರ್ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.
ಈ ಕುರಿತು ದೂರು ದಾಖಲಾಗಿದೆ ಎನ್ನಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಲೇಡಿ ಪಿಎಸ್ ಐ ಆಗಾಗ ಠಾಣೆಗೆ ಕರೆಯಿಸಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ನಿನ್ನೆ ಸಹ ದುಷ್ಯಂತ್ ಮನೆಗೆ ಹೋಗಿ ಅವರ ತಾಯಿ ರಾಧಿಕಾಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ನಿರಂತರವಾಗಿ ಮಾನಸಿಕವಾಗಿ ಕಿರುಕುಳ ನೀಡಿದ್ದಕ್ಕೆ ಯುವಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಯುವಕನನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿಎಸ್ ಐ ವರ್ಷ ವಿರುದ್ಧ ದುಷ್ಯಂತ್ ಪೋಷಕರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.