ಬೆಂಗಳೂರು: 5 ಸಾವಿರ ಕೋಟಿ ವೆಚ್ಚದಲ್ಲಿ 110 ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆ ಜಾರಿ ಆಗಿ ವರ್ಷ ಕಳೆದರೂ ಕೂಡ ಜನರು ನೀರಿನ ಸಂಪರ್ಕ ಪಡೆಯುವುದಕ್ಕೆ ಮುಂದೆ ಬಾರದೆ ಜಲಮಂಡಳಿಯ ಐದನೇ ಹಂತದ ನೀರಿನ ಸಂಪರ್ಕಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಲಮಂಡಳಿಯು ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆಗೆ ಮುಂದಾಗಿದೆ. ಆದರೆ 5ನೇ ಹಂತದ ಕಾವೇರಿ ನೀರು ಬಂದರು ಜನ ಸಂಪರ್ಕ ಪಡೆಯದೆ, ಪಾಲಿಕೆಯ ಹೊರ ವಲಯಗಳಲ್ಲಿ ಜನರು ಬೋರ್ ವೆಲ್ ನೀರನ್ನು ಅವಲಂಬಿಸಿದ್ದಾರೆ.
5 ಲಕ್ಷ ಮನೆಗಳಿಗೆ 5ನೇ ಹಂತದ ನೀರು ಪೂರೈಕೆ ಯೋಜನೆ ಜಾರಿಯಾಗಿದೆ. ಆದರೆ ಇದುವರೆಗೆ ಕೇವಲ 30 ಸಾವಿರ ಮನೆಗಳು ಮಾತ್ರ 5ನೇ ಹಂತದ ಕಾವೇರಿ ಸಂಪರ್ಕ ಪಡೆದಿದ್ದಾರೆ. ಇದರಿಂದ ಮತ್ತೆ ಜಲಮಂಡಳಿ ನಷ್ಟದ ಹಾದಿ ಹಿಡಿದಿದ್ದು, ಇತ್ತ ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಲಕ್ಷಾಂತರ ಹಣ ಪಾವತಿ ಮಾಡಬೇಕು. ಹಾಗಾಗಿ ಜನರು ಬೋರ್ ವೆಲ್ ನೀರಿನ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ದಿನಕ್ಕೆ 750 ಎಂಎಲ್ ಡಿ ನೀರು ಪಂಪ್ ಮಾಡುವ ಸಾಮರ್ಥ್ಯ ಇದ್ದರೂ ಕೂಡ ಕೇವಲ 400 ಎಂಎಲ್ ಡಿ ಪಂಪ್ ಮಾಡಲಾಗುತ್ತಿದೆ.