ನವದೆಹಲಿ: ಹೆಣ್ಣುಮಕ್ಕಳ ಸ್ತನ ಹಿಡಿಯುವುದು ಮತ್ತು ಪೈಜಾಮಾದ ದಾರ ಎಳೆಯುವುದು ಅತ್ಯಾಚಾರ ಯತ್ನವಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ವಿವಾದಿತ ತೀರ್ಪಿಗೆ ಸುಪ್ರೀಂ ಕೋರ್ಟ್(Supreme Court) ಬುಧವಾರ ತಡೆಯಾಜ್ಞೆ ತಂದಿದೆ. ಬಾಲಕಿಯೊಬ್ಬಳ ಮೇಲಿನ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.
ತೀರ್ಪಿನಲ್ಲಿ ನ್ಯಾಯಮೂರ್ತಿಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಂಪೂರ್ಣವಾಗಿ ಸಂವೇದನಾರಹಿತವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ನ್ಯಾ.ಆಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ನ್ಯಾಯಪೀಠ ಹೇಳಿದೆ. ಜೊತೆಗೆ, ಈ ಕುರಿತು ಕೇಂದ್ರ ಸರ್ಕಾರ ಮತ್ತು ಉತ್ತರಪ್ರದೇಶ ಸರ್ಕಾರದ ಪ್ರತಿಕ್ರಿಯೆಯನ್ನೂ ಕೇಳಿದೆ.
“ತೀರ್ಪನ್ನು ಬರೆದಿರುವ ನ್ಯಾಯಮೂರ್ತಿಗಳ ಸಂಪೂರ್ಣ ಸಂವೇದನಾಶೀಲತೆಯ ಕೊರತೆಯನ್ನು ಇದು ತೋರಿಸುತ್ತದೆ. ಇದು ಬಹಳ ನೋವಿನ ಸಂಗತಿ. ಅಲ್ಲದೆ ಅವರ ಹೇಳಿಕೆಯು ಆ ಕ್ಷಣದ ಪ್ರಚೋದನೆಯ ಭಾಗವಾಗಿಯೂ ಇರಲಿಲ್ಲ. ತೀರ್ಪನ್ನು ನಾಲ್ಕು ತಿಂಗಳು ಕಾಯ್ದಿರಿಸಿದ ನಂತರ ನ್ಯಾಯಮೂರ್ತಿಗಳಿಂದ ಇಂಥ ಹೇಳಿಕೆ ಹೊರಬಿದ್ದಿದೆ. ಅಂದರೆ, ಯೋಚಿಸಿಯೇ ಅವರು ಇಂಥ ಹೇಳಿಕೆ ನೀಡಿದ್ದಾರೆ. ಈ ಹಂತದಲ್ಲಿ ನಾವು ಸಾಮಾನ್ಯವಾಗಿ ತಡೆಯಾಜ್ಞೆ ನೀಡುವುದಿಲ್ಲ. ಆದರೆ, ತೀರ್ಪಿನ ಪ್ಯಾರಾ 21, 24 ಮತ್ತು 26 ರಲ್ಲಿನ ಅವಲೋಕನಗಳು ಸಮಂಜಸವಾದುದಲ್ಲ ಮತ್ತು ಅಮಾನವೀಯತೆಯನ್ನು ಪ್ರತಿಬಿಂಬಿಸುತ್ತಿರುವ ಕಾರಣ ನಾವು ಈ ತೀರ್ಪಿಗೆ ತಡೆಯಾಜ್ಞೆ ತರುತ್ತಿದ್ದೇವೆ” ಎಂದು ನ್ಯಾಯಪೀಠ ಹೇಳಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೂ ನ್ಯಾಯಪೀಠದ ಈ ನಿರ್ಧಾರವನ್ನು ಒಪ್ಪಿಕೊಂಡಿದ್ದು, “ಕೆಲವು ತೀರ್ಪುಗಳು ಕೆಲವೊಂದು ಕಾರಣಗಳಿಗಾಗಿ ತಡೆ ಹಿಡಿಯಲ್ಪಡುವ ಅರ್ಹತೆಯನ್ನು ಹೊಂದಿರುತ್ತದೆ” ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಗವಾಯಿ, “ಇದು ಗಂಭೀರ ವಿಷಯ. ನ್ಯಾಯಾಧೀಶರ ಸಂಪೂರ್ಣ ಸಂವೇದನಾಶೀಲತೆಯನ್ನು ಇದು ತೋರಿಸುತ್ತಿದೆ. ಸಮನ್ಸ್ ನೀಡುವಂಥ ಪ್ರಕರಣವಿದು! ನ್ಯಾಯಾಧೀಶರ ವಿರುದ್ಧ ಇಂತಹ ಕಠಿಣ ಪದಗಳನ್ನು ಬಳಸುತ್ತಿರುವುದಕ್ಕೆ ನಾವು ವಿಷಾದಿಸುತ್ತೇವೆ” ಎಂದರು.
ಏನಿದು ಪ್ರಕರಣ?
ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕೆಳಹಂತದ ನ್ಯಾಯಾಲಯವು ಆರೋಪಿಗೆ ಸಮನ್ಸ್ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿ, ಮಾರ್ಚ್ 17ರಂದು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ, “ಮಹಿಳೆಯರ ಸ್ತನ ಹಿಡಿಯುವುದು ಅಥವಾ ಪೈಜಾಮಾದ ದಾರ ಎಳೆಯುವುದನ್ನು ಅತ್ಯಾಚಾರ ಯತ್ನ ಎಂದು ಪರಿಗಣಿಸಲಾಗದು” ಎಂದು ಹೇಳಿ, ಆರೋಪಿಯ ಪರ ತೀರ್ಪು ನೀಡಿದ್ದರು. ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ‘ವೀ ದ ವಿಮೆನ್ ಆಫ್ ಇಂಡಿಯಾ’ ಎಂಬ ಸಂಸ್ಥೆಯು ಹೈಕೋರ್ಟ್ ತೀರ್ಪು ಕುರಿತು ಸುಪ್ರೀಂ ಕೋರ್ಟ್ ನ ಗಮನಕ್ಕೆ ತಂದಿತ್ತು. ಸಂತ್ರಸ್ತೆಯ ತಾಯಿಯೂ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದನ್ನೆಲ್ಲ ಗಮನಿಸಿದ ಸರ್ವೋಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿತ್ತು.