ಉಡುಪಿ: ಮಾನಸಿಕ ಅಸ್ವಸ್ಥ ಮಗಳೊಬ್ಬರು ತನ್ನ ತಾಯಿಯ ಶವದೊಂದಿಗೆ ನಾಲ್ಕು ದಿನ ಕಳೆದ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ತಾಯಿ ಸಾವನ್ನಪ್ಪಿದ ನಾಲ್ಕು ದಿನಗಳ ಕಾಲ, ಸಾವಿನ ಅರಿವೂ ಇಲ್ಲದೆ ತಾಯಿಯೊಂದಿಗೆ ಇದ್ದು, ಕೊನೆಗೆ ತಾನೂ ಸಾವನ್ನಪ್ಪಿದ್ದಾಳೆ. ತಾಯಿ ಜಯಂತಿ ಶೆಟ್ಟಿ (62), ಮಗಳು ಪ್ರಗತಿ ಶೆಟ್ಟಿ (32) ಸಾವನ್ನಪ್ಪಿದವರು. ತಾಯಿ ಹಾಗೂ ಮಗಳು ಕುಂದಾಪುರದ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ವಾಸಿಸುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜಯಂತಿ ಶೆಟ್ಟಿ ಮೃತಪಟ್ಟಿರುವುದು ಬಯಲಾಗಿದೆ. ಆದರೆ, ತಾಯಿ ಸತ್ತಿದ್ದರೂ ಮಗಳು ಶವದ ಜೊತೆಯೇ ದಿನ ಕಳೆಯುತ್ತಿದ್ದಳು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಪ್ರಗತಿ ಶೆಟ್ಟಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.