ಕುಂದಾಪುರ: ತಳ ಸಮುದಾಯದ ನಾಯಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ವಿರೋಧವಿರುವುದರ ಹಿಂದೆ ಯಾರ ಕೈವಾಡವಿದೆ ಎಂದು ಕುಂದಾಪುರ ಪುರಸಭೆ ಸದಸ್ಯರು ಪಕ್ಷಭೇದ ಮರೆತು ಮುಖ್ಯಾಧಿಕಾರಿಯನ್ನು ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನಗರದ ಹೂವಿನ ಮಾರುಕಟ್ಟೆ ಸಮೀಪ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್ ಪುತ್ಥಳಿ ಹಾಗೂ ವೃತ್ತ ನಿರ್ಮಾಣ ಕಾರ್ಯ ವಿಳಂಬದ ಬಗ್ಗೆ ಪ್ರಶ್ನಿಸಿದ ಪುರಸಭೆ ಸದಸ್ಯರು ಗಿರೀಶ್ ಜಿ.ಕೆ, ಚಂದ್ರಶೇಖರ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ ಈ ಹಿಂದಿನ ಸಭೆಗಳಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದ್ದರೂ ನಿರ್ಮಾಣ ಕಾರ್ಯ ವಿಳಂಬವಾಗಲು ಕಾರಣವೇನು ಎಂದು ಪ್ರಸ್ನಿಸಿದರು. ಪೊಲೀಸರ ಅನುಮತಿ ದೊರಕಿಲ್ಲ ಎಂದಾಗ ಪ್ರತಿಕ್ರಿಯಿಸಿದ ಸದಸ್ಯರು, ಪೊಲೀಸರನ್ನು ಕೇಳಿ ಪುರಸಭ ನಿರ್ಣಯ ಮಾಡುವುದಲ್ಲ ಎಂದು ಆಕ್ರೋಶ ಹೊರಹಾಕಿದರು.
ಲೆಕ್ಕಾಧಿಕಾರಿ ಸಭೆಗೆ ಹಾಜರಾಗುತ್ತಿಲ್ಲ. ತಪ್ಪು ಮಾಹಿತಿ ನೀಡುತ್ತಾರೆ. ಸದಸ್ಯರ ಹಕ್ಕುಚ್ಯುತಿ ಆಗುತ್ತಿದೆ. ಲೆಕ್ಕಪತ್ರ ಸರಿ ಇಲ್ಲ, ನಿರ್ಣಯವನ್ನೇ ಬರೆಯಲಿಲ್ಲ ಎಂದು ಗಿರೀಶ್, ಶ್ರೀಧರ ಶೇರೆಗಾರ್ ಹಾಗೂ ಚಂದ್ರಶೇಖರ ಖಾರ್ವಿ ಆಕ್ಷೇಪಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಮುಂದಿನ ಸಭೆಗೆ ಕರೆಸಲಾಗುವುದು ಎಂದರು.
ಯುಜಿಡಿ ಕಾಮಗಾರಿ ಎಟುಕದ ದ್ರಾಕ್ಷಿಯಂತಾಗಿದೆ. ಹಿಂದೆ ಅಧ್ಯಕ್ಷರಾಗಿದ್ದ ಕಲಾವತಿಯವರಿಂದ ಶಿಲಾನ್ಯಾಸ, ವಸಂತಿ ಸಾರಂಗ ಅವರಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿದರೆ ವೀಣಾ ಭಾಸ್ಕರ್ ಅವರು ವೆಟ್‌ವೆಲ್‌ಗೆ ಜಾಗ ಕೊಡಿಸಿದರು. ನೀವೇನು ಮಾಡಿದಿರಿ ಎಂದು ಅಧ್ಯಕ್ಷ ಮೋಹನದಾಸ್ ಶೆಣೈ ಅವರನ್ನು ಕಟುವಾಗಿ ಪ್ರಶ್ನಿಸಿದ ಚಂದ್ರಶೇಖರ ಖಾರ್ವಿ, ಯೋಜನೆಯನ್ನು ನಿರ್ನಾಮ ಮಾಡಿದ ಅಪಕೀರ್ತಿ ಇಬ್ಬರು ಸದಸ್ಯರಿಗೆ ಬರುತ್ತದೆ. ಜನಪ್ರತಿನಿಧಿಗಳ ಮೂಲಕ ಜಾಗ ಗುರುತಿಸದೇ ಅಧಿಕಾರಿಗಳನ್ನು ಹೊಣೆಯಾಗಿಸಲಾಗದು. ಅರೆಬರೆ ಯೋಜನೆಯಲ್ಲಿ ಹಣ ತೊಡಗಿಸಿದ್ದೇ ತಪ್ಪು. ನ್ಯಾಯ ಕೇಳುವ ಜನರ ಧ್ವನಿ ಅಡಗಿಸುವ ಕೆಲಸ ಆಗುತ್ತಿದೆ ಎಂದು ಕಿಡಿ ಕಾರಿದರು.


















