ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಹಾಸ್ಯ ಕಾರ್ಯಕ್ರಮವೊಂದರಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಲೇವಡಿ ಮಾಡಿರುವ ಘಟನೆಯು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಶಿಂಧೆ ಬಣದ ಶಿವಸೇನೆಯ ನಾಯಕರು ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರೆ, ಉದ್ಧವ್ ಬಣದ ಶಿವಸೇನೆಯ ನಾಯಕರು ಕಾಮ್ರಾ ಬೆನ್ನಿಗೆ ನಿಂತಿದ್ದಾರೆ.
ಶಿವಸೇನೆ (ಏಕನಾಥ್ ಶಿಂಧೆ ಬಣ) ಮುಖಂಡ ಸಂಜಯ್ ನಿರುಪಮ್ ಅವರು ಹಾಸ್ಯನಟ ಕಾಮ್ರಾ ವಿರುದ್ಧ ಕಿಡಿಕಾರಿದ್ದು, ಆತನನ್ನು ಥಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರ ಉಪಮುಖ್ಯಮಂತ್ರಿಯನ್ನು ಗುರಿಯಾಗಿಸಿ ಹಾಸ್ಯ ಮಾಡಲು ಕುನಾಲ್ ಕಾಮ್ರಾ ಅವರು ಉದ್ಧವ್ ಠಾಕ್ರೆ ಅವರಿಂದ ಹಣ ಪಡೆದಿದ್ದಾರೆ ಎಂದು ಥಾಣೆಯ ಶಿವಸೇನೆಯ ಸಂಸದ ನರೇಶ್ ಮಾಸ್ಕೆ ಆರೋಪಿಸಿದ್ದಾರೆ.
“ಕಾಮ್ರಾ ಒಬ್ಬ ಗುತ್ತಿಗೆ ಹಾಸ್ಯನಟ. ಆದರೆ ಅವನು ಹಾವಿನ ಬಾಲದ ಮೇಲೆ ಹೆಜ್ಜೆ ಹಾಕಬಾರದಿತ್ತು. ಅದರ ಭೀಕರ ಪರಿಣಾಮಗಳನ್ನು ಅವರೀಗ ಎದುರಿಸಬೇಕಾಗುತ್ತದೆ. ಇನ್ನು ನೀವು ದೇಶಾದ್ಯಂತ ಮುಕ್ತವಾಗಿ ಸಂಚರಿಸಲೂ ಆಗದಂತೆ ಮಾಡುತ್ತೇವೆ. ನಾವು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೈನಿಕರು. ನಾವು ನಿಮ್ಮನ್ನು ಫಾಲೋ ಮಾಡಲು ಆರಂಭಿಸಿದರೆ, ನೀವು ದೇಶವನ್ನೇ ತೊರೆಯಬೇಕಾಗುತ್ತದೆ” ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಶಿವಸೇನೆ ವಕ್ತಾರ ಕೃಷ್ಣ ಹೆಗಡೆ ಕೂಡ ಕಾಮ್ರಾ ಹೇಳಿಕೆಯನ್ನು ಖಂಡಿಸಿದ್ದಾರೆ. ಶಿವಸೇನೆಯ ಯಾವೊಬ್ಬ ಕಾರ್ಯಕರ್ತನಿಗೂ ಕುನಾಲ್ ಕಾಮ್ರಾ ಹೇಳಿಕೆ ಇಷ್ಟವಾಗಿಲ್ಲ. “ಹಾಸ್ಯನಟನಿಗೆ ‘ಶಿವಸೇನೆ ಸೂಕ್ತ ಚಿಕಿತ್ಸೆ’ ನೀಡಲಿದೆ ಎಂದಿದ್ದಾರೆ.
ಇದೇ ವೇಳೆ, ಶಿವಸೇನೆ ನಾಯಕ ಮಿಲಿಂದ್ ದಿಯೋರಾ ಟ್ವೀಟ್ ಮಾಡಿ, “ಆಟೋ ಚಾಲಕರಿಂದ ಭಾರತದ ಎರಡನೇ ಅತಿದೊಡ್ಡ ರಾಜ್ಯವನ್ನು ಮುನ್ನಡೆಸುವ ಮಟ್ಟಕ್ಕೆ ಹೋದ ಸ್ವಯಂ ನಿರ್ಮಿತ ನಾಯಕ ಏಕನಾಥ್ ಶಿಂಧೆ ಜೀ ಅವರನ್ನು ಅಪಹಾಸ್ಯ ಮಾಡುವುದು ವರ್ಗೀಯ ಅಹಂಕಾರವನ್ನು ತೋರಿಸುತ್ತದೆ” ಎಂದಿದ್ದಾರೆ.
“ನಾನು ನಿಜವಾದ ಹಾಸ್ಯನಟರನ್ನು ಗೌರವಿಸುತ್ತೇನೆ. ಬಾಳಾಸಾಹೇಬ್ ಠಾಕ್ರೆ ಅವರೂ ಪ್ರಸಿದ್ಧ ವ್ಯಂಗ್ಯಚಿತ್ರಕಾರರಾಗಿದ್ದರು. ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಇದೀಗ ಬಹಳ ಗಂಭೀರವಾದ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಸ್ಯನಟನನ್ನು ಬಳಸಿಕೊಂಡು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದು ಸ್ವಯಂ ನಿರ್ಮಿತ ರಾಜಕಾರಣಿಯನ್ನು ಗುರಿಯಾಗಿಸಿ ದಾಳಿ ಮಾಡುವ ಯೋಜನೆಯಾಗಿದೆ” ಎಂದು ಕಿಡಿಕಾರಿದ್ದಾರೆ.
ವಿಪಕ್ಷ ನಾಯಕರ ಬೆಂಬಲ:
ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು ಕುನಾಲ್ ಕಾಮ್ರಾರನ್ನು ಬೆಂಬಲಿಸಿ ಮಾತನಾಡಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಖಂಡಿಸಿದ್ದಾರೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ಅವರು ಟ್ವೀಟ್ ಮಾಡಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. “ಮಿಂಧೆ ಅವರ (ಶಿಂಧೆ ಅವರನ್ನು ಹೀಗಳೆಯಲು ಪ್ರತಿಪಕ್ಷಗಳು ಬಳಸುವ ಪದ – ಮರಾಠಿ ಭಾಷೆಯಲ್ಲಿ ಅಧೀನ ಎಂದರ್ಥ) ಹೇಡಿ ಗ್ಯಾಂಗ್ ಸದಸ್ಯರು ಹಾಸ್ಯ ಕಾರ್ಯಕ್ರಮದ ವೇದಿಕೆಯನ್ನು ಹಾನಿಗೊಳಿಸಿದೆ. ಹಾಸ್ಯನಟ ಕುನಾಲ್ ಕಾಮ್ರಾ ಅವರು ಏಕನಾಥ್ ಮಿಂಧೆ ಕುರಿತು ಹಾಡಿರುವ ಹಾಡು 100% ಸತ್ಯವೇ ಆಗಿತ್ತು. ಯಾರೋ ಏನೋ ಹಾಡಿದರು ಎಂದಾಕ್ಷಣ ಪ್ರತಿಕ್ರಿಯಿಸುವವರು ಅಸುರಕ್ಷಿತ ಹೇಡಿಗಳು ಮಾತ್ರ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಇದು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ದುರ್ಬಲಗೊಳಿಸಲು ಏಕನಾಥ್ ಮಿಂಧೆ ಮಾಡಿರುವ ಮತ್ತೊಂದು ಪ್ರಯತ್ನ” ಎಂದು ಬರೆದಿದ್ದಾರೆ.
ಉದ್ಧವ್ ಠಾಕ್ರೆ ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರೂ ಹಾಸ್ಯನಟನ ಪರವಾಗಿ ಮಾತನಾಡಿದ್ದು “ಧೈರ್ಯವಾಗಿರಿ” ಎಂದು ಹೇಳಿದ್ದಾರೆ. “ನೀವು ಇವತ್ತು ಒಬ್ಬ ವ್ಯಕ್ತಿಯ ಮುಖವಾಡವನ್ನು ಕಳಚಿದ್ದೀರಿ. ಈಗ ಆತ ಮತ್ತು ಆತನ ಗ್ಯಾಂಗ್ ನಿಮ್ಮ ಹಿಂದೆ ಬೀಳುತ್ತದೆ. ಅವರ ಕಡೆಯವರೂ ನಿಮ್ಮನ್ನ ಹಿಂಸಿಸುತ್ತಾರೆ. ಆದರೆ, ನಿಮ್ಮ ಅಭಿಪ್ರಾಯವೇನಿದೆಯೋ ಈ ರಾಜ್ಯದ ಜನರ ಅಭಿಪ್ರಾಯವೂ ಅದುವೇ ಆಗಿದೆ” ಎಂದಿದ್ದಾರೆ.
ಕುನಾಲ್ ಕ್ಷಮೆ ಕೇಳಲಿ: ಮುಖ್ಯಮಂತ್ರಿ ಫಡ್ನವೀಸ್
ಇದೇ ವೇಳೆ, ಡಿಸಿಎಂ ಏಕನಾಥ ಶಿಂಧೆ ಪರ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಾನು ಹಾಸ್ಯ ವಿರೋಧಿಯಲ್ಲ. ಆದರೆ, ಕೀಳುಮಟ್ಟದ ಹಾಸ್ಯ ಹಾಗೂ ಉಪಮುಖ್ಯಮಂತ್ರಿಗಳನ್ನು ಅಗೌರವಿಸುವಂಥ ಹಾಸ್ಯವನ್ನು ನಾನು ಒಪ್ಪುವುದಿಲ್ಲ. ಕುನಾಲ್ ಕಾಮ್ರಾ ಅವರು ಶಿಂಧೆ ಅವರ ಕ್ಷಮೆ ಕೇಳಲಿ” ಎಂದಿದ್ದಾರೆ. ಶಿಂಧೆ ಕುರಿತು “ದ್ರೋಹಿ” ಎಂಬ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಫಡ್ನವೀಸ್, “ಯಾರು ದ್ರೋಹಿ, ಯಾರು ದ್ರೋಹಿಯಲ್ಲ ಎಂಬುದನ್ನು 2024ರ ಲೋಕಸಭೆ ಚುನಾವಣೆಯಲ್ಲಿ ಜನರೇ ತೋರಿಸಿಕೊಟ್ಟಿದ್ದಾರೆ” ಎಂದೂ ಟಾಂಗ್ ನೀಡಿದ್ದಾರೆ.