ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ವಿಶ್ವದ ಅತಿದೊಡ್ಡ ಧಾರ್ಮಿಕ ಸಮ್ಮೇಳನ, ಐತಿಹಾಸಿಕ ಮಹಾಕುಂಭಮೇಳ ಬುಧವಾರ ಮುಕ್ತಾಯಗೊಳ್ಳಲಿದೆ. ಮಹಾಶಿವರಾತ್ರಿಯ ದಿನವಾದ ಬುಧವಾರ ಮಹಾ ಕುಂಭ ಮೇಳದ ಅಂತಿಮ ಪುಣ್ಯ ಸ್ನಾನ ನಡೆಯಲಿದ್ದು, 1 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ನಾಳೆ ಮಹಾ ಕುಂಭದ ಕೊನೆಯ ದಿನವಾಗಿರುವ ಕಾರಣ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಹರಿದುಬರುತ್ತಿದ್ದು, ಜನದಟ್ಟಣೆಯನ್ನು ಸಮರ್ಥವಾಗಿ ಎದುರಿಸಲು ಉತ್ತರ ಪ್ರದೇಶ ಸರ್ಕಾರ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.
ಜನವರಿ 13 ರಂದು ಆರಂಭವಾದ ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೆ ಸುಮಾರು 64 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 13, 14, 29, ಫೆಬ್ರವರಿ 3 ಮತ್ತು 12ರಂದು ಇಲ್ಲಿಯವರೆಗೆ ಒಟ್ಟು ಐದು ಅಮೃತ ಸ್ನಾನಗಳು ನಡೆದಿವೆ.
ನಾಳೆ ನಡೆಯುವ ಕೊನೆಯ ಪುಣ್ಯ ಸ್ನಾನವಾದ ಕಾರಣ, ದೇಶದ ಮೂಲೆ ಮೂಲೆಗಳಿಂದಲೂ ಭಕ್ತರು ಪ್ರಯಾಗ್‌ರಾಜ್‌ನತ್ತ ಆಗಮಿಸುತ್ತಿದ್ದಾರೆ. ರೈಲುಗಳು, ವಿಮಾನಗಳು ಮತ್ತು ರಸ್ತೆ ಮಾರ್ಗಗಳು ತುಂಬಿ ತುಳುಕುತ್ತಿವೆ.
ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಉತ್ತರಪ್ರದೇಶ ಸರ್ಕಾರ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಲಕ್ನೋ ಮತ್ತು ಪ್ರತಾಪ್‌ಗಢದಿಂದ ಬರುವ ಯಾತ್ರಾರ್ಥಿಗಳಿಗೆ ಪುಣ್ಯಸ್ನಾನ ಮಾಡಲು ಫಫಾಮೌ ಘಾಟ್ ಅನ್ನು ನಿಗದಿಪಡಿಸಲಾಗಿದೆ. ಅರೈಲ್ ಘಾಟ್ ಅನ್ನು ರೇವಾನ್, ಬಾಂಡಾ, ಚಿತ್ರಕೂಟ್ ಮತ್ತು ಮಿರ್ಜಾಪುರದಿಂದ ಬರುವ ಜನರಿಗೆಂದು ನಿಗದಿಪಡಿಸಲಾಗಿದೆ. ಏತನ್ಮಧ್ಯೆ, ಕೌಶಾಂಬಿಯಿಂದ ಬರುವ ಭಕ್ತರಿಗೆ ಸಂಗಮ್ ಘಾಟ್ ಅನ್ನು ಗೊತ್ತುಪಡಿಸಲಾಗಿದೆ.
ಭದ್ರತಾ ವ್ಯವಸ್ಥೆಗಳ ದೃಷ್ಟಿಯಿಂದ, ಇಡೀ ಕುಂಭ ಮೇಳದಲ್ಲಿ ಯಾವುದೇ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಪಾಸ್ ಹೊಂದಿರುವವರಿಗೆ ಮಾತ್ರ ಗೊತ್ತುಪಡಿಸಿದ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸಲು ಅವಕಾಶವಿರುತ್ತದೆ. ಪ್ರಯಾಗ್‌ರಾಜ್‌ಗೆ ಹೋಗುವ ಎಲ್ಲಾ ಪ್ರಮುಖ ಹೆದ್ದಾರಿಗಳು ಮತ್ತು ಮಾರ್ಗಗಳಲ್ಲಿ ಮೋಟಾರು ಬೈಕುಗಳಲ್ಲಿ ಪೊಲೀಸರ 40 ತಂಡಗಳನ್ನು ನಿಯೋಜಿಸಲಾಗಿದೆ. ಸುಗಮ ಮತ್ತು ಸುರಕ್ಷಿತ ಸಂಚಾರ ಕಲ್ಪಿಸಲು ಇವರು ನೆರವಾಗಲಿದ್ದಾರೆ.
ಪ್ರಯಾಗ್‌ರಾಜ್ ಅನ್ನು ಸಂಪರ್ಕಿಸುವ ಏಳು ರಸ್ತೆ ಮಾರ್ಗಗಳಲ್ಲಿ ಹೆಚ್ಚುವರಿ ಮಹಾನಿರ್ದೇಶಕರು ಮತ್ತು ಇನ್ಸ್ ಪೆಕ್ಟರ್ ಜನರಲ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಕುಂಭಮೇಳದ ಕೊನೆಯ ದಿನವು ಮಹಾಶಿವರಾತ್ರಿಯ ದಿನವೇ ಬಂದಿರುವ ಕಾರಣ, ಇಲ್ಲಿಗೆ ಬರುವ ಭಕ್ತರಿಗೆ ನಗರದ ಎಲ್ಲಾ ಶಿವ ದೇವಾಲಯಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುವುದು, ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಈಗಾಗಲೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾ ಕುಂಭ ಮೇಳದ ಆರಂಭದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಾರಿ 45 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಿದ್ದರು. ಆದರೆ, ಫೆಬ್ರವರಿ 11ರೊಳಗೆ ಈ ಮೈಲುಗಲ್ಲು ಸಾಧಿಸಲಾಗಿದ್ದು, ನಿರೀಕ್ಷೆಗೂ ಮೀರಿ ಭಕ್ತರು ಕುಂಭಮೇಳಕ್ಕೆ ಸಾಕ್ಷಿಯಾಗಿದ್ದಾರೆ. ಹೀಗಾಗಿ ಈಗಾಗಲೇ ಪುಣ್ಯಸ್ನಾನಗೈದವರ ಸಂಖ್ಯೆ 64 ಕೋಟಿ ದಾಟಿದ್ದು, ಬುಧವಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.