ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರ ಗೆಲ್ಲುವುದರ ಮೂಲಕ ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದಾರೆ. ಹೀಗಾಗಿ ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈಗ ಕ್ಷೇತ್ರ ಉಳಿಸಿಕೊಳ್ಳಲು ತಂತ್ರ- ಪ್ರತಿತಂತ್ರದ ಮೊರೆ ಹೋಗಿದ್ದಾರೆ.
ಇನ್ನೂ ಉಪ ಚುನಾವಣೆ ಘೋಷಣೆಯಾಗಿಲ್ಲ. ಆದರೂ ಬಿಜೆಪಿ- ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ಮಧ್ಯೆ ಚನ್ನಪಟ್ಟಣಕ್ಕಾಗಿ ಭಾರೀ ತಂತ್ರಗಳೇ ನಡೆಯುತ್ತಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಸಹೋದರ ಸೋಲುತ್ತಿದ್ದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಮುಖಭಂಗ ಅನುಭವಿಸಿದ್ದರು. ಹೀಗಾಗಿ ಚನ್ನಪಟ್ಟಣ ಕ್ಷೇತ್ರದಿಂದಾದರೂ ಗೆದ್ದು, ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಹೀಗಾಗಿಯೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಡಿಕೆಶಿ ಚನ್ನಪಟ್ಟಣದಲ್ಲಿ ಸುತ್ತಾಡುತ್ತಿದ್ದಾರೆ. ಹೀಗಾಗಿಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ, ಇತ್ತೀಚೆಗೆ ತಾವು ಅಥವಾ ಕುಟುಂಬದವರು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೂ ಈ ವಿಷಯ ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಕೊನೆ ಗಳಿಗೆಯಲ್ಲಿ ಡಿಕೆಶಿ ಸ್ಪರ್ಧೆ ಮಾಡಬಹುದು ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಮಾಜಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಹಾಗೂ ಹಾಲಿ ವಿಪ ಸದಸ್ಯ ಯೋಗೀಶ್ವರ್ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಅಥವಾ ಟಿಕೆಟ್ ನ್ನು ಮೈತ್ರಿಯ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ನೀಡಲು ಮುಂದಾದರೆ ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವನ್ನು ನೀಡಿದ್ದಾರೆ. ಹೀಗಾಗಿ ಇದು ಬಿಜೆಪಿಗೂ ಕಷ್ಟದ ಕಾರ್ಯವಾಗಿದೆ. ಇದರ ಮಧ್ಯೆಯೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ವಶದಲ್ಲಿರುವ ಕ್ಷೇತ್ರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿಯೇ ಭಾನುವಾರ ಪಕ್ಷದ ಪ್ರಮುಖರ ಸಭೆ ನಡೆಸಿ ಚರ್ಚಿಸಿದ್ದಾರೆ.

ಉಪಚುನಾವಣೆಯಲ್ಲೂ ಚನ್ನಪಟ್ಟಣ ಕ್ಷೇತ್ರವನ್ನು ಗೆಲ್ಲಲು ಬಾರೀ ತಂತ್ರ ರೂಪಿಸುತ್ತಿದ್ದಾರೆ. ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಸರತ್ತು ನಡೆಸಿದ್ದಾರೆ. ಹೀಗಾಗಿಯೇ ಭಾನುವಾರ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದಾರೆ. ಆದರೆ, ಅಭ್ಯರ್ಥಿ ಯಾರು ಎನ್ನುವುದನ್ನು ಮಾತ್ರ ಘೋಷಿಸದೆ ರಹಸ್ಯ ಕಾಯ್ದುಕೊಂಡಿದ್ದಾರೆ.
ಚನ್ನಪಟ್ಟಣ ಉಪ ಚನಾವಣೆ ಕುರಿತು ಕುಮಾರಸ್ವಾಮಿ ಅವರು ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಈ ವೇಳೆ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಅಭ್ಯರ್ಥಿ ಯಾರೇ ಆದರೂ ಅವರು ಎನ್‌ಡಿಎ ಮೈತ್ರಿ ಅಭ್ಯರ್ಥಿ ಆಗಿರುತ್ತಾರೆ. ಈ ಕುರಿತು ಯಾವುದೇ ಗೊಂದಲ ಬೇಡ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಮ್ಮತವಾಗಿ, ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ಅಭ್ಯರ್ಥಿಯಾಗಿ ಯಾರೇ ಕಣಕ್ಕೆ ಇಳಿದರೂ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎನ್ನುವುದು ನಮ್ಮೆಲ್ಲರ ಗುರಿ ಆಗಬೇಕು. ಪ್ರಮುಖ ಮುಖಂಡರೆಲ್ಲ ಖುದ್ದು ಭೇಟಿ ಮಾಡಿ ಸಿ.ಪಿ.ಯೋಗೇಶ್ವರ್ ಜೊತೆಗೂ ಚರ್ಚಿಸಬೇಕು. ಯೋಗೇಶ್ವರ್ ಅವರನ್ನು ಎಲ್ಲಾ ಹಂತಗಳಲ್ಲಿಯೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅವರ ಮಾರ್ಗದರ್ಶನ ಪಡೆಯಬೇಕು ಎಂದು ಪರೋಕ್ಷವಾಗಿ ಯೋಗೀಶ್ವರ್ ಅಭ್ಯರ್ಥಿಯಲ್ಲ. ನಮ್ಮ ಪಕ್ಷದವರೇ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿದ್ದಾರೆ.

ಈ ಮೂಲಕ ಯೋಗೀಶ್ವರ್ ಗೂ ಚೆಕ್ ಮೇಟ್ ಕೊಟ್ಟಿದ್ದಾರೆ. ಮುಂದಿನ ವಾರ ನಾನು ಮತ್ತೆ ಬೆಂಗಳೂರಿಗೆ ಬರುತ್ತೇನೆ. ಈ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಭ್ಯರ್ಥಿ ಕುರಿತು ಬಿಜೆಪಿಯ ರಾಜ್ಯ, ರಾಷ್ಟ್ರೀಯ ನಾಯಕರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಕೂಡ ಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಸಿಪಿ ಯೋಗೇಶ್ವರ್ ವಿಚಾರದಲ್ಲೂ ಯಾವುದೇ ಸ್ಪಷ್ಟತೆ ಕೊಡದ ಕುಮಾರಸ್ವಾಮಿ, ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲಾಗುತ್ತದೆ ಅಂತಷ್ಟೇ ಹೇಳಿದರು. ಆದರೆ ಯೋಗೇಶ್ವರ್ ಜತೆಗೂ ಚರ್ಚೆ ನಡೆಸುವಂತೆ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಆದರೆ, ಸಿಪಿ ಯೋಗೇಶ್ವರ್ ನಾನೇ ಚನ್ನಪಟ್ಟಣ ಬೈಎಲೆಕ್ಷನ್ ಅಭ್ಯರ್ಥಿ. ಅಧಿಕೃತ ಘೋಷಣೆ ಮಾಡುವುದು ಒಂದೇ ಬಾಕಿ ಎಂದು ಹೇಳಿದ್ದಾರೆ. ಇದು ನಿಜವಾಗುತ್ತಾ? ಡಿಕೆಶಿ ಅಖಾಡಕ್ಕೆ ಧುಮುಕುವುದು ನಿಜವಾಗುತ್ತಾ? ಅಥವಾ ಜೆಡಿಎಸ್ ಅಭ್ಯರ್ಥಿಆದ್ರೆ, ಅಂತಿಮವಾಗಿ ಎನ್ಡಿಎ ಅಭ್ಯರ್ಥಿ ಯಾರು ಎನ್ನುವುದು ತಿಳಿದುಬರಬೇಕಿದೆ.
