ಮಂಡ್ಯ : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಪಾಂಡವಪುರದಲ್ಲಿ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ನಡೆದಿಲ್ಲ. ಯೋಗೇಶ್ವರ್ ಕೂಡ ನಿಲ್ಲುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಚನ್ನಪಟ್ಟಣ ವಿಚಾರದಲ್ಲಿ ನಮ್ಮ ಪಕ್ಷದ ಪರವಾಗಿ ನಿರ್ಧಾರ ಮಾಡಬೇಕು. ಆ ಕುರಿತು ಚರ್ಚೆಯಾಗುತ್ತಿದೆ ಎಂದಿದ್ದಾರೆ.
ಚನ್ನಪಟ್ಟಣವನ್ನು ಜೆಡಿಎಸ್ ಬಿಟ್ಟಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾವೇನು ಹೋರಾಟ ಕೈ ಬಿಟ್ಟು ಸನ್ಯಾಸತ್ವ ಸ್ವೀಕರಿಸಿಲ್ಲ. ಕ್ಷೇತ್ರ ಗೆಲ್ಲುವುದಕ್ಕಾಗಿ ತಂತ್ರ ನಡೆಸುತ್ತಿದ್ದೇವೆ ಎಂದಿದ್ದಾರೆ.
ಜನರು ಬಹುನಿರೀಕ್ಷೆ ಇಟ್ಟು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್‌ಗೆ 136 ಸೀಟ್‌ಗಳನ್ನು ಕೊಟ್ಟಿರೋದು ನಿಜ. ಈ ಕಾಂಗ್ರೆಸ್ ರಾಜ್ಯದಲ್ಲಿ ಯಾವ ರೀತಿ ಕೆಲಸ ಮಾಟುತ್ತಿದೆ ಎಂಬುವುದನ್ನು ಮೊದಲು ನೋಡಬೇಕು. ದಿನವೂ ಒಂದೊಂದು ಅಕ್ರಮಗಳು ಬೆಳಕಿಗೆ ಬರುತ್ತಿವೆ. ಸಿಎಂ ನನಗೆ ಮಣ್ಣಿನ ಮೇಲೆ ಆಸೆ ಇಲ್ಲ ಅಂತಾ ಹೇಳುತ್ತಿದ್ದರು. ಈಗ ಅವರ ಮಣ್ಣಿನ ಆಸೆಯ ವಿಷಯ ಬಹು ಚರ್ಚಿತ ವಿಷಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಯೇ ನಿಲ್ಲುತ್ತಾರೆ ಎಂದು ನಾನು ಹೇಳಿದ್ದೇನೆಯೇ ಹೊರತು ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸುತ್ತಾರೆ ಎಂದು ಹೇಳಿಲ್ಲ. ನನ್ನ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು ಎಂದಿದ್ದಾರೆ.
ಜೆಡಿಎಸ್‌ಗೆ ಮರುಜನ್ಮ ಕೊಟ್ಟಿದ್ದೇವೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ‘ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡಲು ಆಗುವುದಿಲ್ಲ. ಯಾವ ರೀತಿ ನನ್ನ ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ ಎಂಬ ಚರ್ಚೆ ಈಗ ಅನಗತ್ಯ. ಅದನ್ನೆಲ್ಲ ನಾನು ಬೀದಿಯಲ್ಲಿ ನಿಂತು ಚರ್ಚೆ ಮಾಡಲ್ಲ ಎಂದಿದ್ದಾರೆ.